ನವದೆಹಲಿ : ಮುಖ್ಯಮಂತ್ರಿ ಕಮಲ್ ನಾಥ್ ರಾಜೀನಾಮೆಯ ನಂತರ ಮಧ್ಯಪ್ರದೇಶದಲ್ಲಿ ಹೊಸ ಸರ್ಕಾರ ರಚಿಸುವ ಪ್ರಯತ್ನಗಳು ನಡೆಯುತ್ತಿವೆ, ಮುಂದಿನ ಸರ್ಕಾರ ಮಾರ್ಚ್ 25 ರೊಳಗೆ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆ, ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಇಂದು ರಾಜ್ಯಪಾಲ ಲಾಲ್ಜಿ ಟಂಡನ್ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದರು. ಮಾತುಕತೆ ವಿವರಗಳು ಇನ್ನಷ್ಟೇ ಬಹಿರಂಗವಾಗಬೇಕಿದೆ.
ಇನ್ನೊಂದು ಮೂಲದ ಪ್ರಕಾರ ಕೊರೊನಾ ವೈರಸ್ ಹಿನ್ನಲೆ ಶನಿವಾರ ನಡೆಯಬೇಕಿದ್ದ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಸೋಮವಾರ ನಡೆಯಲಿದೆ. ಶಾಸಕಾಂಗ ಪಕ್ಷದ ಸಭೆಯ ನಂತರ ಮುಂದಿನ ಸರ್ಕಾರ ರಚಿಸುವ ಕುರಿತು ಬಿಜೆಪಿ ಸ್ಪಷ್ಟಪಡಿಸಲಿದೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆಗಾಗಿ ಕೇಂದ್ರ ವೀಕ್ಷಕರಾದ ಧರ್ಮಮೇಂದ್ರ ಪ್ರಧಾನ್ ಮತ್ತು ವಿನಯ್ ಸಹಸ್ರಬುದ್ಧೆ ಭೋಪಾಲ್ ಹೋಗುವ ಸಾಧ್ಯತೆ ಇದೆ.
ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ನಿವಾಸದಲ್ಲಿ ಶುಕ್ರವಾರ ರಾತ್ರಿ ನಡೆಯಬೇಕಿದ್ದ ಭೋಜನ ಕೂಟವೂ ಕೂಡ ಕೊರೊನಾ ವೈರಸ್ ಹಿನ್ನೆಲೆ ರದ್ದಾಗಿದೆ ಎಂದು ಮೂಲಗಳು ತಿಳಿಸಿವೆ. ಮಾರ್ಚ್ 25 ನವರಾತ್ರಿಯ ನಂತರ ಹೊಸ ಸರ್ಕಾರ ಅಧಿಕಾರ ವಹಿಸಿಕೊಳ್ಳಬಹುದು ಎಂದು ಐಎಎನ್‌ಎಸ್ ಮೂಲಗಳು ತಿಳಿಸಿವೆ.
ಮುಂದಿನ ಮುಖ್ಯಮಂತ್ರಿ ಹುದ್ದೆಗೆ ಕೂಡ ಅನೇಕ ಹೆಸರುಗಳು ಕೇಳಿ ಬಂದಿದ್ದು, ಅದರಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಅವರ ನಡುವೆ ಪೈಪೊಟಿ ನಡೆಯಲಿದೆ ಎಂದು ಹೇಳಲಾಗಿದೆ.