ನವದೆಹಲಿ: ತ್ರಿವಳಿ ತಲಾಖ್ ಸಂಬಂಧಿತ ವಿಧೇಯಕಕ್ಕೆ ಬದಲಾವಣೆ ತಂದು ಜಾರಿಗೆ ಮುಂದಾಗಿದ್ದ ಹಿಂದಿನ ಎನ್ಡಿಎ ಸರ್ಕಾರಕ್ಕೆ ರಾಜ್ಯಸಭೆಯಲ್ಲಿ ಬ್ರೇಕ್ ಹಾಕಲಾಗಿತ್ತು. ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡಿರುವ ಮೋದಿ ಸರ್ಕಾರ ಇಂದು ಲೋಕಸಭೆಯಲ್ಲಿ ಮತ್ತೆ ಮಸೂದೆ ಮಂಡಿಸಲಿದೆ ಎಂದು ತಿಳಿದುಬಂದಿದೆ.
ಕಳೆದ ಫೆಬ್ರವರಿಯಲ್ಲಿ ಸುಗ್ರೀವಾಜ್ಞೆ ಮೂಲಕ ಪರಿಷ್ಕೃತ ಕಾನೂನನ್ನು ಜಾರಿ ಮಾಡಿದ್ದ ಸರ್ಕಾರ, ಚುನಾವಣೆ ಹೊಸ್ತಿಲಲ್ಲಿ ಮತ್ತೆ ಲೋಕಸಭೆ ಮುಂದೆ ತಂದಿತ್ತು. ಆನಂತರ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ಆಕ್ಷೇಪದಿಂದಾಗಿ ವಿಧೇಯಕ ಅಂಗೀಕಾರವಾಗಲಿಲ್ಲ. ಮೂರು ಬಾರಿ ತಲಾಖ್ ಹೇಳಿ ವಿಚ್ಛೇದನ ನೀಡುವ ಮುಸ್ಲಿಂ ಸಮುದಾಯದ ವ್ಯಕ್ತಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸುವ ಅಂಶವಿದ್ದರಿಂದ ಆಯ್ಕೆ ಸಮಿತಿಗೆ ಕಳುಹಿಸಬೇಕು ಎಂಬುದು ಪ್ರತಿಪಕ್ಷಗಳ ವಾದವಾಗಿತ್ತು. ಆದರೆ ಸರ್ಕಾರ ಇದನ್ನು ಒಪ್ಪಿರಲಿಲ್ಲ.
ಚುನಾವಣೆ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನದಲ್ಲಿ 10 ಸುಗ್ರೀವಾಜ್ಞೆಗಳನ್ನು ಕಾನೂನಾಗಿ ಮಾರ್ಪಡಿಸಲು ಸರ್ಕಾರ ಮುಂದಾಗಿದೆ. ಅಧಿವೇಶನ ಆರಂಭವಾದ 45 ದಿನಗಳೊಳಗೆ ಸದನದ ಸಮ್ಮತಿ ಪಡೆದು ಕಾನೂನಾಗಿ ಮಾರ್ಪಡಿಸದಿದ್ದರೆ ಅವು ರದ್ದಾಗಲಿವೆ.