ನವದೆಹಲಿ: ಕೊರೊನಾ ವೈರಸ್ ರೂಪಾಂತರಗೊಂಡು ಇಂಗ್ಲೆಂಡ್ನಲ್ಲಿ ಅವಾಂತರ ಸೃಷ್ಟಿಮಾಡುತ್ತಿದೆ. ಇದರಿಂದ ಮುಂಜಾಗ್ರತೆಯಾಗಿ ಇಂಗ್ಲೆಂಡಿನಿಂದ ಬರುವ ಎಲ್ಲ ವಿಮಾನಗಳ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಬೇಕೆಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ಒತ್ತಾಯಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅರವಿಂದ್ ಕೇಜ್ರಿವಾಲ್ ಇಂಗ್ಲೆಂಡಿನಲ್ಲಿ ಕಾಣಿಸಿಕೊಂಡಿರುವ ವೈರಸ್ ಅತಿ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ. ಇದರಿಂದಾಗಿ ಇಂಗ್ಲೆಂಡಿನಿಂದ ಬರುವ ಎಲ್ಲ ವಿಮಾನಗಳನ್ನು ತಕ್ಷಣದಿಂದಲೇ ನಿರ್ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ನಿಯಂತ್ರಣಕ್ಕೆ ಸಿಗದ ಕೊರೊನಾ : ಅರವಿಂದ್ ಕೇಜ್ರಿವಾಲ್ ತೆಗೆದುಕೊಂಡ ನಿರ್ಧಾರವೇನು?
ಈ ಮೊದಲು ಬ್ರಿಟನ್ನಲ್ಲಿ ರೂಪಾಂತರಗೊಂಡ ವೈರಸ್ನಿಂದ ಪರಿಸ್ಥಿತಿ ಕೈಮೀರಿದೆ ಎಂದು ಆರೋಗ್ಯ ಕಾರ್ಯದರ್ಶಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಈ ರೀತಿಯ ಮನವಿ ಮಾಡಿದ್ದಾರೆ. ಕೆಲವು ರಾಷ್ಟ್ರಗಳು ಇಂಗ್ಲೆಂಡಿನಿಂದ ಬರುವ ವಿಮಾನಗಳನ್ನು ಈಗಾಗಲೇ ನಿರ್ಬಂಧಿಸಿ ಮುಂಜಾಗ್ರತೆ ವಹಿಸಿವೆ.
ಈಗಾಗಲೇ ನವದೆಹಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದೆ. ಇದನ್ನೂ ತಡೆಯಲು ಅಲ್ಲಿನ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಜನರ ಸೇರುವಿಕೆ ಮೇಲೆ ನಿರ್ಬಂಧ ವಿಧಿಸಲು ತೀರ್ಮಾನಿಸಲಾಗಿದೆ.
ಇದರ ಜೊತೆಗೆ ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸದ ಮಾರುಕಟ್ಟೆಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲು ಅಧಿಕಾರ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸುವುದಾಗಿ ಸಿಎಂ ಕೇಜ್ರಿವಾಲ್ ತಿಳಿಸಿದ್ದಾರೆ.