ಗುಂಟೂರು: ಟಿಕ್ಟಾಕ್ನಲ್ಲಿ ಸ್ನೇಹ ಬೆಳೆಸಿಕೊಂಡು, ಕುಟುಂಬಸ್ಥರ ವಿರೋಧದ ನಡುವೆಯೂ ಲವ್ ಮ್ಯಾರೇಜ್ ಆಗಿ ಒಂದೇ ತಿಂಗಳಿಗೆ ನವದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ.
ಚಿತ್ತೂರು ಜಿಲ್ಲೆಯ ಕೋಟಗುಡಿಬಂಡ ನಿವಾಸಿ ಕೂಟಾಲ ಶೈಲಜಾ ಮತ್ತು ಗುಂಟೂರು ಜಿಲ್ಲೆಯ ಮಂಗಳಗಿರಿ ನಿವಾಸಿ ದದ್ದನಾಲ ಪವನ್ ಕುಮಾರ್ 10 ತಿಂಗಳಗಳ ಹಿಂದೆ ಟಿಕ್ಟಾಕ್ ಮೂಲಕ ಸ್ನೇಹವಾಗಿತ್ತು. ಬಳಿಕ ಇವರ ಸ್ನೇಹ ಪ್ರೀತಿಗೆ ದಾರಿ ಮಾಡಿಕೊಡ್ತು. ಪೋಷಕರ ವಿರೋಧದ ನಡುವೆಯೂ ಈ ಪ್ರೇಮಿಗಳು ತಿಂಗಳ ಹಿಂದೆ ತಿರುಪತಿಗೆ ತೆರಳಿ ಮದುವೆ ಮಾಡಿಕೊಂಡರು.
ಮದುವೆ ಬಳಿಕ ಈ ನವದಂಪತಿ ಗುಂಟೂರು ಜಿಲ್ಲೆಯ ಮಾಚಾಯ ಪಾಲೆಂ ಗ್ರಾಮದಲ್ಲಿ ಜೀವನ ನಡೆಸುತ್ತಿದ್ದರು. ಆದ್ರೆ ‘ನಮ್ಮ ಮಗಳನ್ನು ಮನೆಗೆ ಕಳುಹಿಸಿವಂತೆ’ ಯುವಕನಿಗೆ ಯುವತಿ ಕುಟುಂಬಸ್ಥರು ಬಲವಂತ ಹಾಕುತ್ತಿದ್ದರು. ಇಲ್ಲವಾದಲ್ಲಿ ನಿನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಪೋಷಕರ ಬೆದರಿಕೆಗೆ ಹೆದರಿದ ನವದಂಪತಿ ಗುರುವಾರ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ‘ನಮ್ಮ ಸಾವಿಗೆ ಪೋಷಕರೇ ಕಾರಣ’ವೆಂದು ಡೆತ್ ನೋಟ್ನಲ್ಲಿ ಬರೆದಿದ್ದಾರೆ.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.