ತಿರುವನಂತಪುರಂ(ಕೇರಳ): ಆಯಿ ರಾಜವಂಶದ ಆಳ್ವಿಕೆಯಲ್ಲಿ ನಿರ್ಮಿಸಲಾಗಿದೆ ಎಂದು ನಂಬಲಾದ ಅತ್ಯಂತ ಪ್ರಾಚೀನ ವಿಷ್ಣು ದೇವಾಲಯ ಕುಸಿದಿದೆ ಎಂದು ಮೂಲಗಳು ತಿಳಿಸಿವೆ.
ಕೇರಳದ ತಿರುವನಂತಪುರಂನ ಕೋವಲಂ ಬಳಿಯ ವಿಜಿಂಜಂ ಕರಾವಳಿ ಪೊಲೀಸ್ ಠಾಣೆಯ ಬಳಿ ಇರುವ ಈ ದೇವಾಲಯವನ್ನು ತಿರುವಾಂಕೂರು ದೇವಸ್ವಂ ಮಂಡಳಿ ನಿರ್ವಹಿಸುತ್ತಿತ್ತು.
ದೇವಾಲಯದ ನಿರ್ವಹಣೆ ಸರಿಯಾಗಿ ಮಾಡದಿರುವುದೇ ಕುಸಿತಕ್ಕೆ ಕಾರಣವಾಗಿದೆ ಎಂದು ವರದಿಗಳು ತಿಳಿಸಿವೆ.
"ಕ್ರಿ.ಶ 10 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಭಾವಿಸಲಾದ ವಿಷ್ಣು ದೇವಸ್ಥಾನದೆಡೆಗೆ ಹಲವು ವರ್ಷಗಳಿಂದ ಅಧಿಕಾರಿಗಳು ಗಮನ ಹರಿಸದ ಕಾರಣ ಶಿಥಿಲಾವಸ್ಥೆಯಲ್ಲಿತ್ತು. ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಅಜಾಗರೂಕತೆಯಿಂದಾಗಿಯೇ ದೇವಾಲಯ ಕುಸಿದಿದೆ" ಎಂದು ಸ್ಥಳೀಯರು ತಿಳಿಸಿದ್ದಾರೆ.
ದೇವಾಲಯದ ಮೇಲೆ ಆಲದ ಮರ ಬೆಳೆದಾಗಲೂ ಮಂಡಳಿಯು ಕಾರ್ಯನಿರ್ವಹಿಸಲಿಲ್ಲ. ದೇವಾಲಯದ ರಸ್ತೆ ಮತ್ತು ಹತ್ತಿರದ ಭೂಮಿಯನ್ನು ಅತಿಕ್ರಮಿಸಲಾಗಿದೆ ಎಂದು ತಿಳಿದು ಬಂದಿದೆ.