ನವದೆಹಲಿ: 2017-18ರಲ್ಲಿ ಬರೋಬ್ಬರಿ 6,900 ಆನ್ಲೈನ್ ಬ್ಯಾಂಕಿಂಗ್ ವಂಚನೆ ಪ್ರಕರಣಗಳು ದಾಖಲಾಗಿವೆ ಎಂದು ಲೋಕಸಭೆಯಲ್ಲಿ ಕೇಂದ್ರದ ಗೃಹ ಖಾತೆ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ ಮಾಹಿತಿ ನೀಡಿದರು.
ದೇಶದಲ್ಲಿ ಸೈಬರ್ ಸ್ಪೇಸ್ ಹೆಚ್ಚಾದಷ್ಟು ಸೈಬರ್ ಕ್ರೈಂ ಕೂಡ ಹೆಚ್ಚಾಗಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ನೀಡಿರುವ ಮಾಹಿತಿ ಪ್ರಕಾರ, 2017ರಲ್ಲಿ 3,466 ಹಾಗೂ 2018ರಲ್ಲಿ 3,353 ಆನ್ಲೈನ್ ವಂಚನೆ ಪ್ರಕರಣಗಳು ದಾಖಲಾಗಿವೆ ಎಂದು ಸಚಿವರು ಸಂಸತ್ತಿನ ಕೆಳಮನೆಗೆ ತಿಳಿಸಿದರು.
ಆನ್ಲೈನ್ ವಂಚನೆಗಳನ್ನು ತಡೆಯಲು ಹಾಗೂ ಆನ್ಲೈನ್ ಬಳಕೆದಾರರು ವಂಚನೆಗೊಳಗಾಗುವುದನ್ನು ತಡೆಯಲು, ಫೋನ್ ವಂಚನೆ ಕುರಿತ ಆಂತರಿಕ ಸಚಿವರ ಸಮಿತಿ (IMCPF) ಸೇರಿದಂತೆ ಗೃಹ ಸಚಿವಾಲಯವು ಕೆಲವು ಕ್ರಮಗಳನ್ನು ಕೈಗೊಂಡಿದೆ. ಈ ಸಮಿತಿಯು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಹಣಕಾಸು ಸೇವೆಗಳ ಇಲಾಖೆ, ದೂರಸಂಪರ್ಕ ಇಲಾಖೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಕಾನೂನು ಜಾರಿ ಸಂಸ್ಥೆಗಳ ಸದಸ್ಯರನ್ನು ಒಳಗೊಂಡಿದೆ ಎಂದು ಕಿಶನ್ ರೆಡ್ಡಿ ವಿವರಿಸಿದ್ದಾರೆ.