ನವದೆಹಲಿ: ವಿಷಾನಿಲ ಸೋರಿಕೆಯಿಂದ 11 ಜನ ಸಾವಿಗೀಡಾಗಿ ಸಾವಿರಾರು ಜನ ಅಸ್ವಸ್ಥಗೊಂಡಿರುವ ವಿಶಾಖಪಟ್ಟಣಕ್ಕೆ ಪರಿಣತಿ ಸಿಬಿಆರ್ಎನ್ (CBRN-chemical, biological, radiological and nuclear) ಎನ್ಡಿಆರ್ಎಫ್ ತಂಡವನ್ನು ಕಳುಹಿಸಿಕೊಡಲಾಗಿದೆ.
ಪ್ರಸ್ತುತ ಕಾರ್ಖಾನೆಯಿಂದ ಹೊರಬರುತ್ತಿರುವ ವಿಷಾನಿಲದ ಪ್ರಮಾಣ ಅತ್ಯಂತ ಕಡಿಮೆಯಾಗಿದ್ದು, ಅನಿಲ ಸೋರಿಕೆಯನ್ನು ಸಂಪೂರ್ಣ ನಿಲ್ಲಿಸುವವರೆಗೂ ಎನ್ಡಿಆರ್ಎಫ್ ತಂಡ ಸ್ಥಳದಿಂದ ಕದಲಲಾರದು ಎಂದು ಎನ್ಡಿಆರ್ಎಫ್ನ ಡೈರೆಕ್ಟರ್ ಜನರಲ್ ಎಸ್.ಎನ್. ಪ್ರಧಾನ್ ಹೇಳಿದ್ದಾರೆ.
ಅನಿಲ ಸೋರಿಕೆಯಾಗಿರುವ ಕಾರ್ಖಾನೆಯ ಹತ್ತಿರದ 1000 ಜನರ ಮೇಲೆ ಅತಿಹೆಚ್ಚು ಪರಿಣಾಮವಾಗಿದೆ ಎಂದು ಎನ್ಡಿಎಂಎ ಸದಸ್ಯ ಕಮಲ್ ಕಿಶೋರ್ ತಿಳಿಸಿದ್ದಾರೆ.
ಕಾರ್ಖಾನೆ ಸುತ್ತಲಿನ 3 ಕಿ.ಮೀವರೆಗಿನ ಪ್ರದೇಶಗಳ 250 ಕುಟುಂಬಗಳನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ. ಇಲ್ಲಿನ ಪ್ರತಿಮನೆಗಳಿಗೂ ಎನ್ಡಿಆರ್ಎಫ್ ಸದಸ್ಯರು ಭೇಟಿ ನೀಡಿ ಅಸ್ವಸ್ಥಗೊಂಡ ಜನರನ್ನು ಪತ್ತೆ ಮಾಡುತ್ತಿದ್ದಾರೆ.
ಅನಿಲದಿಂದ ಅಸ್ವಸ್ಥಗೊಂಡಿರುವ ಜನರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ತಂಡಗಳಿಗೆ ನೆರವಾಗಲು ವಿಶೇಷ ತಾಂತ್ರಿಕ ಸಹಾಯ ತಂಡವನ್ನು ಇಷ್ಟರಲ್ಲೇ ವಿಶಾಖಪಟ್ಟಣಕ್ಕೆ ಕರೆಸಲಿದ್ದೇವೆ ಎಂದು ಎಸ್.ಎನ್. ಪ್ರಧಾನ್ ತಿಳಿಸಿದರು.