ನವದೆಹಲಿ: ಇತ್ತೀಚಿನ ಆದಾಯ ತೆರಿಗೆ ಇಲಾಖೆಯ ದಾಳಿಯ ನಂತರ ದೆಹಲಿ ಮೂಲದ ರಿಯಲ್ ಎಸ್ಟೇಟ್ ಸಮೂಹವು ₹ 3,000 ಕೋಟಿಗಿಂತ ಹೆಚ್ಚಿನ ಆದಾಯವಿರುವುದಾಗಿ ಒಪ್ಪಿಕೊಂಡಿದೆ ಎಂದು ಸಿಬಿಡಿಟಿ ಡಿಸೆಂಬರ್ 2 ರಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಸಂಸ್ಥೆಯನ್ನು ಗುರುತಿಸದಿದ್ದರೂ, ಅಧಿಕಾರಿಗಳ ಮೂಲಗಳು ಇದನ್ನು ಓರಿಯಂಟಲ್ ಇಂಡಿಯಾ ಗ್ರೂಪ್ ಎಂದು ಹೇಳಿಕೊಂಡಿವೆ.
ಮೂಲಸೌಕರ್ಯ, ಗಣಿಗಾರಿಕೆ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿರುವ ಗುಂಪಿನ 25 ಕ್ಕೂ ಹೆಚ್ಚು ಕಂಪನಿಗಳ ಮೇಲೆ ದಾಳಿ ಮಾಡಿದ್ದ ಐಟಿ ಇಲಾಖೆ ಇಲ್ಲೆಲ್ಲ ತಪಾಸಣೆ ಹಾಗೂ ಸಮೀಕ್ಷೆ ಮಾಡಿ ಈ ಹಣವನ್ನ ಪತ್ತೆ ಹಚ್ಚಿತ್ತು ಎಂದು ಹೇಳಲಾಗಿದೆ.
₹ 250 ಕೋಟಿಗಿಂತ ಹೆಚ್ಚಿನ ಮೊತ್ತದ ಲೆಕ್ಕವಿಲ್ಲದ ನಗದು ರಶೀದಿಗಳ ವಿವರಗಳನ್ನು ಹೊಂದಿರುವ ಲೆಡ್ಜರ್‌ಗಳನ್ನು ಕೇಂದ್ರೀಯ ನೇರ ಮಂಡಳಿ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಇದ್ಯಾವ ವ್ಯವಹಾರಕ್ಕೂ ಈ ಸಂಸ್ಥೆ ತೆರಿಗೆ ಸಹ ಪಾವತಿಸಲಿಲ್ಲ. ಇದೇ ವೇಳೆ ಲೆಕ್ಕವಿಲ್ಲದ ಸುಮಾರು ₹ 3.75 ಕೋಟಿ ನಗದನ್ನು ಐಟಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಈ ಗ್ರೂಪ್ ಐಟಿ ದಾಳಿಯ ಬಳಿಕ ₹ 3,000 ಕೋಟಿಗಿಂತ ಹೆಚ್ಚಿನ ಆದಾಯವನ್ನು ಬಹಿರಂಗಪಡಿಸಿದೆ ಮತ್ತು ಅದರ ಮೇಲೆ ತೆರಿಗೆ ಪಾವತಿಸಲು ಒಪ್ಪಿಕೊಂಡಿದೆ ಎಂದು ಹೇಳಿಕೆ ತಿಳಿಸಿದೆ.
ದಾಳಿಯ ನಂತರ ಅಧಿಕಾರಿಗಳು ಈ ಸಂಸ್ಥೆಯ ಸುಮಾರು 32 ಬ್ಯಾಂಕ್ ಅಕೌಂಟ್ಗಳನ್ನ ಸೀಜ್ ಮಾಡಲಾಗಿದೆ ಎಂದು ಅಧಿಕಾರಿಗಳ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.