ನವಿ ಮುಂಬೈ: ತನಗೆ ಕೊರೊನಾ ಬಂದಿದ್ದು, ಆತ್ಮಹತ್ಯೆ ಮಾಡಿಕೊಳ್ಳುವೆ ಎಂದುಹೆಂಡ್ತಿ ಮುಂದೆ ಹೇಳಿ ಮನೆಬಿಟ್ಟಿದ್ದ ವ್ಯಕ್ತಿಯೋರ್ವ ಗರ್ಲ್ಫ್ರೆಂಡ್ ಜತೆ ಸಿಕ್ಕಿಬಿದ್ದಿರುವ ವಿಚಿತ್ರ ಘಟನೆ ನಡೆದಿದ್ದು, ಪ್ರಕರಣ ಬೇಧಿಸುವಲ್ಲಿ ಮುಂಬೈ ಪೊಲೀಸರು ಯಶಸ್ವಿಯಾಗಿದ್ದಾರೆ.
ಮದುವೆಯಾಗಿದ್ದ ವ್ಯಕ್ತಿ ಮಹಾರಾಷ್ಟ್ರದ ನವಿ ಮುಂಬೈನಲ್ಲಿ ಹೆಂಡತಿ ಜತೆ ವಾಸವಾಗಿದ್ದನು. ಜುಲೈ 24ರಂದು ಹೆಂಡತಿಗೆ ಕರೆ ಮಾಡಿರುವ ಆತ ತನಗೆ ಕೊರೊನಾ ಪಾಸಿಟಿವ್ ಬಂದಿದ್ದು, ಸಾಯುವುದಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿ ಫೋನ್ ಕಟ್ ಮಾಡಿದ್ದಾನೆ.
ಇದಾದ ಬಳಿಕ ಫೋನ್ ಸ್ವೀಚ್ ಆಫ್ ಆಗಿದೆ. ಮರುದಿನವೇ ಆತನ ಬೈಕ್ ಕೀ, ಬೈಕ್, ಹೆಲ್ಮೆಟ್ ಹಾಗೂ ಬ್ಯಾಗ್ ಲಭ್ಯವಾಗಿವೆ.
ಇದಕ್ಕೆ ಸಂಬಂಧಿಸಿದಂತೆ ಹೆಂಡತಿ ಪೊಲೀಸ್ ಠಾಣೆಯಲ್ಲಿ ತನ್ನ ಸಹೋದರನ ಸಹಾಯದಿಂದ ನಾಪತ್ತೆ ಪ್ರಕರಣ ದಾಖಲು ಮಾಡಿದ್ದಾರೆ ಎಂದು ಪೊಲೀಸ್ ಸಹಾಯಕ ಆಯುಕ್ತ ವಿನಾಯಕ ವಾಸ್ತ್ ಹೇಳಿದ್ದಾರೆ.
ಪ್ರಕರಣ ದಾಖಲು ಮಾಡಿಕೊಂಡು ಶೋಧ ಕಾರ್ಯ ಆರಂಭಿಸಿದ್ದ ಪೊಲೀಸರಿಗೆ ಆರಂಭದಲ್ಲಿ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆತನ ಮೊಬೈಲ್ ಫೋನ್ ಟ್ರ್ಯಾಕ್ ಮಾಡುವ ಕೆಲಸ ಸಹ ಮಾಡಿದ್ದರು. ಆದರೆ ಅದು ಸ್ವಿಚ್ ಆಫ್ ಆಗಿದ್ದರಿಂದ ಯಾವುದೇ ರೀತಿಯ ಮಾಹಿತಿ ಲಭ್ಯವಾಗಿಲ್ಲ. ಕಳೆದ ಒಂದು ವಾರದ ಹಿಂದೆ ಮೊಬೈಲ್ ಫೋನ್ ಮತ್ತೊಮ್ಮೆ ಟ್ರ್ಯಾಕ್ ಮಾಡಿದಾಗ ಮಧ್ಯಪ್ರದೇಶದ ಇಂದೋರ್ನಲ್ಲಿರುವುದು ಲೊಕೇಷನ್ ಪತ್ತೆಯಾಗಿದೆ.
ಅಲ್ಲಿಗೆ ಹೋದಾಗ ಆತ ವಿವಾಹವಾಗಿರುವ ಮಾಹಿತಿ ಲಭ್ಯವಾಗಿದೆ. ಜತೆಗೆ ತನ್ನ ಗುರುತು ಬದಲಾವಣೆ ಮಾಡಿಕೊಂಡಿದ್ದಾಗಿ ತಿಳಿದು ಬಂದಿದೆ. ಸೆಪ್ಟೆಂಬರ್ 15ರಂದು ಲವರ್ ಜತೆ ಅತನನ್ನ ಮುಂಬೈಗೆ ಕರೆ ತರಲಾಗಿದೆ.