ಶತಮಾನದ ರೋಗ ಎಂದು ಬಿಲ್ ಗೇಟ್ಸ್ ಅವರಿಂದ ಬಣ್ಣಿಸಲ್ಪಟ್ಟಿರುವ ಕೊವಿಡ್-19 ಸೋಂಕು ಜಗತ್ತಿನಾದ್ಯಂತ 1ಲಕ್ಷಕ್ಕೂ ಹೆಚ್ಚು ಜನರಲ್ಲಿ ಸೋಂಕು ಉಂಟು ಮಾಡುವ ಮೂಲಕ ನಮ್ಮ ಸಮಾಜದ ಸಾಮಾಜಿ ಮತ್ತು ಆರ್ಥಿಕ ವಲಯಗಳನ್ನು ನಾಶ ಮಾಡುತ್ತಿದೆ. ಕೊರೊನಾ ವೈರಸ್‌ನ ಹರಡುವಿಕೆಯನ್ನು ನಿಯಂತ್ರಿಸಲು ಸಾಧ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ ನಂಬುತ್ತದಾದರೂ, ಭಾರತವೂ ಸೇರಿದಂತೆ ಎಂಬತ್ತು ದೇಶಗಳು ಆಗಲೇ ಗಂಭೀರ ಸಮಸ್ಯೆಗೆ ಸಿಲುಕಿಕೊಂಡಿವೆ. '
ಚೀನಾದಲ್ಲಿ ಕೇಂದ್ರ ಸ್ಥಾನ ಹೊಂದಿದ್ದರೂ ಈ ವೈರಸ್‌ನಿಂದಾಗಿ ಇರಾನ್, ಇಟಲಿ, ದಕ್ಷಿಣ ಕೊರಿಯಾ ಮತ್ತು ಜಪಾನ್‌ನಂತಹ ದೇಶಗಳಲ್ಲಿ ಸಾವಿನ ಸಂಖ್ಯೆ ಗರಿಷ್ಠ ಪ್ರಮಾಣದಲ್ಲಿದೆ. ಈ ಮಾರಕ ಸೋಂಕು ಇಟಲಿ ದೇಶದಿಂದ 24 ಸೋಂಕಿತ ವ್ಯಕ್ತಿಗಳ ಮೂಲಕ 14 ದೇಶಗಳಿಗೆ ಹರಡಿದ್ದರೆ, 97 ಸೋಂಕಿತ ವ್ಯಕ್ತಿಗಳಿಂದ ಇರಾನ್ ಮೂಲಕ 11 ದೇಶಗಳಿಗೆ ತಲುಪಿದೆ. ಭಾರತದಲ್ಲಿ ದೃಢಪಟ್ಟಿರುವ 30 ಪ್ರಕರಣಗಳಲ್ಲಿ, ಅರ್ಧದಷ್ಟು ಜನ ಇಟಲಿ ದೇಶದ ಪ್ರವಾಸಿಗರು.
ರೋಗವನ್ನು ಪ್ರತಿಬಂಧಿಸುವ ಉದ್ದೇಶದಿಂದ ಭಾರತವು ಸಮರೋಪಾದಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸಮಗ್ರ ರೋಗ ಸರ್ವೇಕ್ಷಣ ಯೋಜನೆ ಇಂಟಿಗ್ರೇಟೆಡ್ ಡಿಸೀಜ್ ಸರ್ವೈಲೆನ್ಸ್ ಪ್ರೋಗ್ರಾಂ (ಐಡಿಎಸ್‌ಪಿ) ಮೂಲಕ ಕಾಯಿಲೆಯನ್ನು ಪತ್ತೆ ಮಾಡಲು ಅದು ಎಲ್ಲಾ ರಾಜ್ಯಗಳ ಮೇಲೆ ನಿಗಾ ವಹಿಸಿದ್ದಲ್ಲದೇ 21 ವಿಮಾನ ನಿಲ್ದಾಣಗಳು ಹಾಗೂ 65 ಬಂದರು ಪ್ರದೇಶಗಳಿಗೆ ಆಗಮಿಸುವ ವಿದೇಶಿ ಮತ್ತು ದೇಸಿ ಪ್ರವಾಸಿಗರ ಆರೋಗ್ಯವನ್ನು ಹತ್ತಿರದಿಂದ ಗಮನಿಸುತ್ತಿರುವುದು ಈ ಸಂಕಷ್ಟದ ಸಮಯದಲ್ಲಿ ಕೈಗೊಂಡಿರುವ ಉತ್ತಮ ಕ್ರಮವಾಗಿದೆ.
ಕೊರೊನಾ ವೈರಸ್ ಕೊಳೆಗೇರಿಗಳಿಂದ ಹರಡುವ ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕಾ ಔಷಧ ಸಂಸ್ಥೆಯ (ಇನ್ಸ್‌ಟಿಟ್ಯೂಟ್ ಆಫ್ ಪ್ರಿವೆಂಟಿವ್ ಮೆಡಿಸಿನ್) ನಿರ್ದೇಶಕರು ನೀಡಿದ ಎಚ್ಚರಿಕೆಯ ಹಿನ್ನೆಲೆಯಲ್ಲಿ ತೆಲಂಗಾಣ ಹೈಕೋರ್ಟ್ ಸ್ಪಷ್ಟ ನಿರ್ದೇಶನಗಳನ್ನು ನೀಡಿದೆ. ಕೊಳೆಗೇರಿಗಳಿಗೆ ಸಾಕಷ್ಟು ಪ್ರಮಾಣದಲ್ಲಿ ನೀರಿನ ಸರಬರಾಜು ಮಾಡಬೇಕು ಹಾಗೂ ಅವುಗಳಿಗೆ ಹತ್ತಿರದಲ್ಲಿ ವಿಶೇಷ ವಾರ್ಡ್‌ಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲು ಅದು ಸೂಚಿಸಿದೆ. ಕೆಮ್ಮು ಮತ್ತು ಸೀನಿನ ಮೂಲಕ ವೈರಸ್ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಕೊಳೆಗೇರಿ ವಾಸಿಗಳಿಗೆ ಶುದ್ಧೀಕರಿಸುವ ಸಾಧನಗಳು ಹಾಗೂ ಮುಖಗವಸ್ತುಗಳನ್ನು ವಿತರಿಸಬೇಕು ಎಂದು ರಾಜ್ಯ ಸರಕಾರಕ್ಕೆ ತಿಳಿಸಿದೆ. ಚೀನಾದಲ್ಲಿ ಜನಸಾಂದ್ರತೆ ಒಂದು ಚದರ ಕಿಮೀಗೆ 148 ಇದ್ದರೆ, ಭಾರತದಲ್ಲಿ ಅದರ ಪ್ರಮಾಣ 420. ಇಷ್ಟೊಂದು ದೊಡ್ಡ ಪ್ರಮಾಣದ ಜನಸಾಂದ್ರತೆ ಹೊಂದಿರುವ ಭಾರತದ ಕೊಳೆಗೇರಿಗಳಲ್ಲಿ ಕೋವಿಡ್-19 ವೈರಸ್ ಒಂದು ವೇಳೆ ಹರಡಿದರೆ, ಅದರ ಪರಿಣಾಮಗಳನ್ನು ಊಹಿಸುವುದೂ ಅಸಾಧ್ಯ. ಹೀಗಾಗಿ ಕೊರೊನಾ ವಿರುದ್ಧದ ಯುದ್ಧದಲ್ಲಿ, ಪ್ರತಿಯೊಬ್ಬ ನಾಗರಿಕನೂ ಸೈನಿಕನೇ ಆಗಿದ್ದು, ತನ್ನನ್ನು ಮತ್ತು ತನ್ನ ದೇಶವನ್ನು ಆತ ರಕ್ಷಿಸಿಕೊಳ್ಳಬೇಕಾಗಿದೆ.
ಕೋವಿಡ್-19 ಸೋಂಕನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ನಿರಾಕರಿಸಿದ್ದರೂ, ಈ ವೈರಸ್ ತನ್ನ ಸಂಪೂರ್ಣ ಸಾಮರ್ಥ್ಯವನ್ನು ಇನ್ನೂ ತೋರುವುದು ಬಾಕಿ ಇದೆ ಎಂಬ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಹೇಳಿಕೆ ಆಘಾತ ತಂದಿದೆ. ಚೀನಾದ ಸೋಂಕು ಕೇಂದ್ರಿತ ಪ್ರದೇಶದಲ್ಲಿ ದೃಢಪಟ್ಟಿರುವ 80 ಸಾವಿರ ಕೋವಿಡ್-19 ಸೋಂಕು ಪ್ರಕರಣಗಳಲ್ಲಿ 4 ಸಾವಿರ ಜನ ಈಗಾಗಲೇ ಮೃತಪಟ್ಟಿದ್ದು, 6 ಸಾವಿರ ಜನ ರೋಗದೊಂದಿಗೆ ಹೋರಾಟ ನಡೆಸಿದ್ದಾರೆ. ಈ ಮಧ್ಯೆ, ಕೋವಿಡ್-19 ವೈರಸ್ ಅನ್ನು ಚೀನಾದ ಸ್ಥಳೀಯ ಪ್ರಯೋಗಾಲಯಗಳಲ್ಲಿ ಉತ್ಪಾದಿಸಲಾಗಿದೆ ಎಂಬ ವರದಿಗಳೂ ಇವೆ.
ಚೀನಾದ ನಂತರ ಅತ್ಯಧಿಕ ಸಾವಿನ ಪ್ರಕರಣಗಳು ದಾಖಲಾಗಿದ್ದು ಇಟಲಿ (148), ಇರಾನ್ (107) ಮತ್ತು ದಕ್ಷಿಣ ಕೊರಿಯಾ (35) ದೇಶಗಳಲ್ಲಿ. ಅಮೆರಿಕದಂತಹ ಮುಂದುವರಿದ ದೇಶಗಳಲ್ಲಿ ಸಹ ಕೊರೊನಾ ಭೀತಿ ಹರಡಿರುವುದರ ಹಿಂದಿನ ತರ್ಕ ಬಲು ಸರಳ. ಮಾನವ ಸೋಂಕಿತ ಕೊರೊನಾ ವೈರಸ್‌ನ ಮಾದರಿಗಳು ಒಟ್ಟು ಏಳು ಇದ್ದು, ಈ ಪೈಕಿ ನಾಲ್ಕು ಮಾದರಿಗಳು ಅಪಾಯಕಾರಿಯಲ್ಲ. ಮೆರ್ಸ್ ಮತ್ತು ಸಾರ್ಸ್‌ನಂತಹ ಮೂರು ಮಾದರಿಗಳಿಗಿಂತ ಹೊಸ ಕೊರೊನಾ ವೈರಸ್ ಭಿನ್ನವಾಗಿದ್ದು, ಈ ಸೋಂಕು ಗುಣಪಡಿಸಲು ಯಾವ ರೀತಿಯ ಚಿಕಿತ್ಸೆ ನೀಡಬೇಕೆಂಬುದು ಇದುವರೆಗೆ ಪತ್ತೆಯಾಗಿಲ್ಲ. ಸಮಸ್ಯೆ ಉಲ್ಬಣವಾಗಲು ಇದೂ ಒಂದು ಕಾರಣ.
ಕೊರೊನಾ ವೈರಸ್ ಸೋಂಕು ತಗಲಿದ ಶೇಕಡಾ 80ರಷ್ಟು ಪ್ರಕರಣಗಳು ಸಾಧಾರಣ ಎಂಬುದನ್ನು ಅಧ್ಯಯನದ ವರದಿಗಳು ತೋರಿಸಿವೆ. ಉಳಿದ ಪ್ರಕರಣಗಳಲ್ಲಿ ಶೇಕಡಾ 18 ತೀವ್ರ ಹಾಗೂ ಬಾಕಿ ಶೇಕಡಾ 2ರಷ್ಟು ಪ್ರಕರಣಗಳು ಮಾತ್ರ ಮಾರಣಾಂತಿಕ. ಸುಮಾರು 100 ವರ್ಷಗಳ ಹಿಂದೆ ಸ್ಪ್ಯಾನಿಶ್ ನೆಗಡಿ ಜ್ವರ ಜಗತ್ತಿನ ಶೇಕಡಾ 40ರಷ್ಟು ಜನಸಂಖ್ಯೆಯನ್ನು ಬಾಧಿಸಿತ್ತಲ್ಲದೇ 5 ಕೋಟಿ ಜನರ ಜೀವ ತೆಗೆದುಕೊಂಡಿತ್ತು. ಏಷ್ಯದ ನೆಗಡಿ ಜ್ವರ 1957ರಲ್ಲಿ 20 ಲಕ್ಷ ಜನರನ್ನು ಕೊಂದಿತ್ತು. ಹಾಂಗ್‌ಕಾಂಗ್‌ನ ನೆಗಡಿ ಜ್ವರ 1968ರಲ್ಲಿ 33 ಸಾವಿರ ಜನರ ಬಲಿ ಪಡೆದಿತ್ತು. ಈ ಅನುಭವಗಳ ಹಿನ್ನೆಲೆಯಲ್ಲಿ, ಸಾರ್ವಜನಿಕರ ಆರೋಗ್ಯ ಸಂಕಷ್ಟವನ್ನು ಮೂಡಿಸಿರುವ ಕೋವಿಡ್-19 ಉಂಟು ಮಾಡಿರುವ ಭೀತಿಯು ಜಗತ್ತಿನಾದ್ಯಂತ ದೇಶಗಳಲ್ಲಿ ನಡುಕದ ಅಲೆಗಳನ್ನು ಹುಟ್ಟಿಸಿದೆ.
ಈ ಹಿನ್ನೆಲೆಯಿಂದ ನೋಡಿದಾಗ, ಕಳಪೆ ಸ್ವಚ್ಛತಾಪ್ರಜ್ಞೆ ಮತ್ತು ಸಾರ್ವಜನಿಕ ಆರೋಗ್ಯ ನೀತಿಯೇ ಇಲ್ಲದಿರುವ ಭಾರತವು ಕೊರೊನಾ ಭೀತಿಯನ್ನು ಹೇಗೆ ಎದುರಿಸಬಹುದು ಎಂಬ ಕಳವಳ ತಜ್ಞರನ್ನು ಕಾಡತೊಡಗಿದೆ. ಚೀನಾದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಮೊದಲ ಬಾರಿ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಕಂಡುಬಂದಾಗ, ಅದರ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೋತಿದ್ದರೂ, ನಂತರದಲ್ಲಿ ಸೋಂಕನ್ನು ಹರಡದಂತೆ ನಿಯಂತ್ರಿಸಲು ಆ ದೇಶ ಅತ್ಯಂತ ವಿಸ್ತೃತ ಕ್ರಮಗಳನ್ನು ಕೈಗೊಂಡಿತು. ಕೇವಲ ಒಂಬತ್ತೇ ದಿನಗಳಲ್ಲಿ 1,000 ಹಾಸಿಗೆಗಳ ಆಸ್ಪತ್ರೆಯನ್ನು ನಿರ್ಮಿಸಿತಲ್ಲದೇ ದಿನದ 24 ಗಂಟೆಗಳುದ್ದಕ್ಕೂ ವೈದ್ಯಕೀಯ ನಿಗಾ ವ್ಯವಸ್ಥೆಯನ್ನು ಚೀನಾ ಕಲ್ಪಿಸಿತು. ಈ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಚೀನಾದ ಅಂದಾಜು 200 ವೈದ್ಯಕೀಯ ವ್ಯಕ್ತಿಗಳು ಜೀವ ಕಳೆದುಕೊಂಡಿದ್ದಾರೆ. ಗುಣಮುಖರಾಗಿದ್ದರೂ ಮತ್ತೆ ಸೋಂಕಿಗೆ ಒಳಗಾಗುವವರ ಸಂಖ್ಯೆಯಲ್ಲಿ ಗಾಬರಿ ಹುಟ್ಟಿಸುವ ಏರಿಕೆ ಕಂಡುಬಂದಿರುವುದು ಕೋವಿಡ್-19ರ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕಾದ ಅನಿವಾರ್ಯತೆಯನ್ನು ಮೂಡಿಸಿದೆ.
ಸೋಂಕಿಗೆ ಒಳಗಾಗಿದ್ದ ಮೂವರು ಸಾಗರೋತ್ತರ ಪ್ರವಾಸಿಗಳನ್ನು ಪ್ರತ್ಯೇಕವಾಗಿಡಲು ಕ್ರಮ ಕೈಗೊಳ್ಳುವ ಮೂಲಕ ಸೋಂಕು ರಾಜ್ಯದಲ್ಲಿ ಹಬ್ಬಲು ಕೇರಳ ಸರಕಾರ ಬಿಡಲಿಲ್ಲ. ಸೋಂಕಿನ ವಿರುದ್ಧದ ಮೊದಲ ತಡೆಗೋಡೆಯಾಗಿ ವಲಸೆ ಇಲಾಖೆ ಅಧಿಕಾರಿಗಳು, ಪೊಲೀಸರು, ಪಂಚಾಯಿತಿಗಳು, ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯರ ತಂಡವನ್ನು ಅದು ಸಕ್ಷಮಗೊಳಿಸಿದ್ದು ಉತ್ತಮ ಫಲಿತಾಂಶ ನೀಡಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಕೇರಳ ಸರಕಾರ, ಸೋಂಕಿನ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರಚಾರ ಕ್ರಮಗಳನ್ನು ಪ್ರಾರಂಭಿಸಿತು. ಈ ಹಿಂದೆ ನಿಫಾ ಸೋಂಕು ಹರಡಿದ್ದ ಪ್ರಕರಣದ ಹಿನ್ನೆಲೆಯಲ್ಲಿ ಕೇರಳ ಸರಕಾರ ಈ ಸಲ ತಕ್ಷಣದ ಪರಿಹಾರ ಕ್ರಮಗಳನ್ನು ಕೈಗೊಂಡಿದೆ. ಕೇರಳದಲ್ಲಿರುವ ಸದೃಢ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಪರಿಸ್ಥಿತಿಯನ್ನು ಹತೋಟಿಗೆ ತರಲು ನೆರವಾಗಿವೆ. ಸಾರ್ವಜನಿಕರಲ್ಲಿ ಜಾಗೃತಿ ಹೆಚ್ಚಿಸುವುದು, ವದಂತಿಗಳನ್ನು ಇಲ್ಲವಾಗಿಸುವುದು, ಮತ್ತು ಸೋಂಕಿನ ಭೀತಿಯನ್ನು ಹಿಮ್ಮೆಟ್ಟಿಸಲು ವೈಯಕ್ತಿಕ ಸುರಕ್ಷಾ ಆಡಳಿತವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸರಕಾರಗಳು ಮುಂದಾಗಬೇಕಿದೆ.