ನವದೆಹಲಿ: ಕೊರೊನಾ ವಿರುದ್ಧ ಹೋರಾಡಲು ನ್ಯಾಷನಲ್ ಕೆಡೆಟ್ ಕಾರ್ಪ್ಸ್ (ಎನ್ಸಿಸಿ) ಮುಂದಾಗಿದೆ. ಕೊರೊನಾ ವಿರುದ್ಧ ಹೋರಾಡುತ್ತಿರುವ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಎನ್ಸಿಸಿ ಯೋಗದಾನ್ ಕಾರ್ಯಕ್ರಮದ ಅಡಿಯಲ್ಲಿ ಸಹಾಯ ಹಸ್ತ ಚಾಚಲು ಮುಂದೆ ಬಂದಿದೆ.
ಈಗಿರುವ ಎನ್ಸಿಸಿ ಅಭ್ಯರ್ಥಿಗಳಿಗೆ ತಾತ್ಕಾಲಿಕ ಉದ್ಯೋಗಾವಕಾಶವನ್ನು ನೀಡಲಿದ್ದು ಕೊರೊನಾ ವಿರುದ್ಧ ಹೋರಾಡಲು ತರಬೇತಿ ನೀಡಿ ಕಾರ್ಯಾಚರಣೆಗೆ ಇಳಿಸಲಿದೆ. ಸಹಾಯವಾಣಿ ಕೇಂದ್ರಗಳಲ್ಲಿ ನೆರವು, ಪರಿಹಾರ ಸಾಮಗ್ರಿಗಳ ಪೂರೈಕೆ, ಅಗತ್ಯ ವಸ್ತುಗಳ ವಿತರಣೆ, ಆಹಾರ ಪೂರೈಕೆ ಮುಂತಾದ ವಿಚಾರಗಳಲ್ಲಿ ಸರ್ಕಾರದ ಅಧಿಕಾರಿಗಳಿಗೆ ಸಹಕರಿಸಲಿದ್ದು, ಕಾನೂನು ಸುವ್ಯವಸ್ಥೆ, ಮಿಲಿಟರಿ ಕರ್ತವ್ಯಗಳಿರುವ ಜಾಗದಲ್ಲಿ ಕೆಲಸ ಮಾಡಲು ಎನ್ಸಿಸಿ ಅಭ್ಯರ್ಥಿಗಳಿಗೆ ಅವಕಾಶವಿಲ್ಲ.
18 ವರ್ಷ ಮೇಲ್ಪಟ್ಟ ಎನ್ಸಿಸಿ ಅಭ್ಯರ್ಥಿಗಳನ್ನು ಈ ಕರ್ತವ್ಯಕ್ಕೆ ನೇಮಿಸಲಾಗುತ್ತದೆ. 8ರಿಂದ 20 ಮಂದಿಯ ಸಣ್ಣ ಸಣ್ಣ ಗುಂಪುಗಳನ್ನು ರಚಿಸಲಿದ್ದು ಇದಕ್ಕೆ ಓರ್ವ ಆಫೀಸರ್ನನ್ನು ನೇಮಕ ಮಾಡಲಾಗುತ್ತದೆ. ರಾಜ್ಯ ಸರ್ಕಾರ ಅಥವಾ ಜಿಲ್ಲಾಡಳಿತಗಳು ತಮಗೆ ಎನ್ಸಿಸಿ ಸ್ವಯಂಸೇವಕರು ಬೇಕಾದಾಗ ಎನ್ಸಿಸಿ ನಿರ್ದೇಶನಾಲಯಗಳ ಮೂಲಕ ವಿನಂತಿ ಕಳಿಸಬೇಕಾಗುತ್ತದೆ.
ರಕ್ಷಣಾ ಇಲಾಖೆಯಡಿಯಲ್ಲಿ ಎನ್ಸಿಸಿ ಕಾರ್ಯನಿರ್ವಹಣೆ ಮಾಡುತ್ತಿದ್ದು ಭಾರತದ ಅತಿ ದೊಡ್ಡ ಯುವ ಸಂಘಟನೆಗಳಲ್ಲಿ ಒಂದಾಗಿದೆ. ಅವಶ್ಯಕತೆ ಇದ್ದಾಗ ಸಾಮಾಜಿಕ ಸೇವೆಯಲ್ಲಿ ಭಾಗಿಯಾಗೋದು ಮಾತ್ರವಲ್ಲದೇ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಕೂಡಾ ಪಾಲ್ಗೊಳ್ಳುತ್ತಿದೆ.