ಕೋಲ್ಕತ್ತಾ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತ ನಡೆಸಿದ ಏರ್ಸ್ಟ್ರೈಕ್ ಬಗ್ಗೆ ಈ ಮೊದಲು ಮುಕ್ತಕಂಠದಿಂದ ಶ್ಲಾಘಿಸಿದ್ದ ಮಮತಾ ಬ್ಯಾನರ್ಜಿ, ಇದೀಗ ದಾಳಿ ವೇಳೆ ಏನೇನಾಯ್ತು ಎಂದು ದೇಶಕ್ಕೆ ತಿಳಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಚುನಾವಣಾ ಆಧಾರಿತ ರಾಜಕಾರಣಕ್ಕಿಂದ ಸೈನಿಕರ ಜೀವ ಮುಖ್ಯ ಎಂದಿರುವ ಪಶ್ಚಿಮಬಂಗಾಳದ ಸಿಎಂ, ಕೇಂದ್ರ ಸರ್ಕಾರ ವಿರುದ್ಧ ಹರಿಹಾಯ್ದಿದ್ದಾರೆ.
ಏರ್ಸ್ಟ್ರೈಕ್ ನಡೆದ ನಂತರ 300-350 ಉಗ್ರರು ಬಲಿಯಾದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಆದರೆ ವಿದೇಶಿ ಮಾಧ್ಯಮಗಳು ಒಂದೂ ಸಾವಾಗಿಲ್ಲ ಎಂದು ಹೇಳಿವೆ. ಮತ್ತೊಂದು ಮಾಧ್ಯವ ಓರ್ವ ಮಾತ್ರ ಸಾವಿಗೀಡಾದ ಎಂದು ಹೇಳಿದೆ. ದಾಳಿಯಲ್ಲಿ ಎಷ್ಟು ಉಗ್ರರು ಮೃತಪಟ್ಟರು ಎಂದು ದೇಶದ ಜನರಿಗೆ ಮಾಹಿತಿ ನೀಡಬೇಕು ಎಂದ ಅವರು, ನಿಜವಾಗಿ ಬಾಂಬ್ ಅನ್ನು ಎಲ್ಲಿ ಹಾಕಲಾಯ್ತು? ಟಾರ್ಗೆಟ್ ಸ್ಥಳದಲ್ಲಿಯೇ ಬಾಂಬ್ ದಾಳಿ ಮಾಡಲಾಯ್ತೇ? ಎಂದೂ ಪ್ರಶ್ನಿಸಿದ್ದಾರೆ.
ಸೈನಿಕರ ವಿಚಾರದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಇದನ್ನು ಮತವಾಗಿ ಪರಿವರ್ತಿಸಿಕೊಳ್ಳುತ್ತಿರುವುದನ್ನು ನಾನು ಖಂಡಿಸುತ್ತೇನೆ. ಚುನಾವಣೆಗಾಗಿ ಯುದ್ಧ ಬೇಡ, ನಮಗೆ ಶಾಂತಿ ಬೇಕು ಎಂದು ಕೇಂದ್ರ ಸರ್ಕಾರವನ್ನು ಕುಟುಕಿದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಾಯುಪಡೆಯ ವೈಸ್ ಮಾರ್ಷಲ್ ಆರ್ಜಿಕೆ ಕಪೂರ್, ದಾಳಿ ಕುರಿತ ಮಾಹಿತಿಯನ್ನು ಬಿಡುಗಡೆ ಮಾಡುವುದು ರಾಜಕೀಯ ನಾಯಕರಿಗೆ ಬಿಟ್ಟದ್ದು ಎಂದಿದ್ದಾರೆ. ನಾವು ಟಾರ್ಗೆಟ್ ಮಾಡಿದ ಸ್ಥಳದಲ್ಲಿಯೇ ಬಾಂಬ್ ದಾಳಿ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.