ನವದೆಹಲಿ: ಕೊರೊನಾ ಬಿಕ್ಕಟ್ಟಿನ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ 20 ಲಕ್ಷ ಕೋಟಿ ರೂ.ಗಳ ಬೃಹತ್ ಆರ್ಥಿಕ ಪ್ಯಾಕೇಜ್ ಅನ್ನು ನಿನ್ನೆ ಘೋಷಿಸಿದ್ದರು. ಇಂದು ಸಂಜೆ 4 ಗಂಟೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಯಾವೆಲ್ಲಾ ಕ್ಷೇತ್ರಗಳಿಗೆ ಎಷ್ಟು ಮೊತ್ತ ಮತ್ತು ಅದನ್ನು ಹೇಗೆ ಬಳಸುತ್ತಾರೆ ಎಂಬ ಬಗ್ಗೆ ವಿವರಗಳನ್ನು ನೀಡುತ್ತಾರೆ.
ಈ ಆರ್ಥಿಕ ಪ್ಯಾಕೇಜ್ ಭಾರತದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ಯ ಶೇ 10 ರಷ್ಟಿದೆ. ಇದು ದೇಶದ ವಿವಿಧ ಸ್ತರದ ಆರ್ಥಿಕ ವ್ಯವಸ್ಥೆಗೆ ಸಂಬಂಧಿಸಿದ ವಿಭಾಗಗಳಿಗೆ ಬೆಂಬಲದೊಂದಿಗೆ ಶಕ್ತಿ ತುಂಬಲಿದೆ.
ಬಡವರು, ಕಾರ್ಮಿಕರು, ವಲಸೆ ಕಾರ್ಮಿಕರು, ಜಾನುವಾರು ಸಾಕುವವರು, ಮೀನುಗಾರರು, ಸಂಘಟಿತ ಅಥವಾ ಅಸಂಘಟಿತ ವಲಯ ಸೇರಿದಂತೆ ಪ್ರತಿ ವಲಯಕ್ಕೂ ಈ ಪ್ಯಾಕೇಜ್‌ನಲ್ಲಿ ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಲಾಗುವುದು ಎಂದು ಪ್ರಧಾನಿ ಹೇಳಿದ್ದರು.