ನವದೆಹಲಿ: 'ನಾರಿ ಶಕ್ತಿ ಪುರಸ್ಕಾರ್' ಪ್ರಶಸ್ತಿ ಪುರಸ್ಕೃತರು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ತಮ್ಮ ಸಾಧನೆಯ ಹಿಂದಿನ ಅನುಭವಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಪುರಸ್ಕೃತ ಮಹಿಳೆಯೊಬ್ಬರು ನಾನು ವಿದ್ಯಾಭ್ಯಾಸ ಮಾಡುತ್ತಿದ್ದ ಸಂಧರ್ಭದಲ್ಲಿ ಹುಡುಗಿಯರು ಕಾಲೇಜು ಮೆಟ್ಟಿಲೆರುತ್ತಿರಲಿಲ್ಲ. ನಾನು ಅಧ್ಯಯನವನ್ನು ಮುಗಿಸಿದ ಬಳಿಕ ಪುರುಷ ಪ್ರಾಬಲ್ಯವಿರುವ ಆಟೋಮೊಬೈಲ್ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡೆ, ಪ್ರಸ್ತುತ ನಾನು ಆಟೋಮೊಬೈಲ್ ರಿಸರ್ಚ್ ಅಸೋಸಿಯೇಷನ್ ಅನ್ನು ಮುನ್ನಡೆಸುತ್ತಿದ್ದೇನೆ. ಹಾಗಾಗಿಯೇ ನಾನು ಇಂದು ಇಲ್ಲಿದ್ದೇನೆ ಎಂದು ತಿಳಿಸಿದರು.
ಹೀಗೆ ತಮ್ಮ ಕಷ್ಟ ದಿನಗಳ ಅನುಭವವನ್ನ ನೆನೆದ ಇನ್ನೋರ್ವ ಸಾಧಕಿ ನಾನು ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿದ್ದೆ, ಹೆಣ್ಣುಮಕ್ಕಳಿಗೆ ಜನ್ಮ ನೀಡಿದ ಕಾರಣ ನನ್ನ ಪತಿ ನನ್ನನ್ನು ತೊರೆದರು. ಮತ್ತೆ ನನ್ನ ಹೆತ್ತವರ ಮನೆಗೆ ಬಂದೆ. ನನ್ನ ತಂದೆ ವಿದ್ಯಾಭ್ಯಾಸ ನೀಡಿದ ಹಿನ್ನೆಲೆಯಲ್ಲಿ ನಾನು ಮತ್ತಷ್ಟು ಮಹಿಳೆಯರಿಗೆ ಉದ್ಯೋಗ ನೀಡಿಲು ಸಾಧ್ಯವಾಯಿತು ಎಂದು ತಮ್ಮ ಜೀವನದ ಕಷ್ಟದ ದಿನಗಳ ಬಗ್ಗೆ ಮಾತನಾಡಿದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ವಿಶೇಷ ಸಂದರ್ಭದಲ್ಲಿ ದೆಹಲಿಯಲ್ಲಿ 'ನಾರಿ ಶಕ್ತಿ ಪುರಸ್ಕಾರ್' ಪ್ರಶಸ್ತಿ ಪುರಸ್ಕೃತರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದರು.