ನವದಹೆಲಿ: ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಭರ್ಜರಿ ಬೇಟೆಯಾಡಿದ್ದು, ಅಲ್ ಖೈದಾ ಸಂಘಟನೆ ಬೆಂಬಲಿತ ಅಂತರ್‌ರಾಜ್ಯ 9 ಮಂದಿ ಉಗ್ರರನ್ನು ಬಲೆಗೆ ಕೆಡವಿದೆ. ಬಂಧಿತರಿಂದ ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು, ಪಟಾಕಿಯಲ್ಲಿನ ಪೊಟಾಶಿಯಂಅನ್ನು ಬಳಸಿ ಸುಧಾರಿತ ಸ್ಫೋಟಕಗಳನ್ನು ತಯಾರಿಸಿ ವಿವಿಧೆಡೆ ಸ್ಫೋಟಕ್ಕೆ ಸಂಚು ರೂಪಿಸಿದ್ದರು ಎನ್ನಲಾಗಿದೆ.
ಬಂಧಿತ ಆರೋಪಿಗಳು ಶಸ್ತ್ರಾಸ್ತ್ರಗಳನ್ನು ನೀಡಲು ಕಾಶ್ಮೀರಕ್ಕೆ ಹೋಗಲು ಯೋಜನೆ ರೂಪಿಸಿದ್ದರು ಎಂಬ ಮಾಹಿತಿ ತನಿಖೆಯಿಂದ ಗೊತ್ತಾಗಿದೆ.
ಎನ್‌ಐಎ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ 6 ಮಂದಿಯನ್ನು ಹಾಗೂ ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಇಂದ ಬೆಳಗ್ಗೆ ಮೂವರನ್ನು ಬಂಧಿಸಿತ್ತು. ದೆಹಲಿ-ಎನ್‌ಸಿಆರ್ ಮತ್ತು ದೇಶದ ಇತರೆಡೆ ಜನರ ಮನಸ್ಸಿನಲ್ಲಿ ಉಗ್ರರತ್ವವನ್ನು ತುಂಬಿ ತಮ್ಮ ಜಾಲವನ್ನು ವಿಸ್ತರಿಸಲು ಮುಂದಾಗಿದ್ದರು ಎನ್ನಲಾಗಿದೆ.
ದಾಳಿ ವೇಳೆ ಅಪಾರ ಪ್ರಮಾಣದ ಪಟಾಕಿಗಳನ್ನು ವಶಕ್ಕೆ ಪಡೆದಿದ್ದಾರೆ. ಪಟಾಕಿಗಳಲ್ಲಿನ ಪೊಟಾಶಿಯಂಅನ್ನು ಬಳಸಿ ಸುಧಾರಿತ ಸ್ಫೋಟಕ(ಐಇಡಿ)ಗಳನ್ನು ತಯಾರಿಸಲು ಮುಂದಾಗಿದ್ದರು ಎಂದು ಎನ್‌ಐಎ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತರ ಪೈಕಿ ಮುರ್ಷೀದ್ ಹಸನ್, ಯಾಕೂಬ್ ಬಿಸ್ವಾಸ್, ಮತ್ತು ಮೊಸರಾಫ್ ಹುಸೇನ್ ಎಂದು ಗುರುತಿಸಲಾಗಿದ್ದು, ಈ ಮೂವರು ಎರ್ನಾಕುಲಂ ಮೂಲದವರಾಗಿದ್ದಾರೆ.
ನಜ್ಮಸ್ ಶಕೀಬ್, ಅಬು ಸುಫಿಯಾನ್, ಮೈನುಲ್ ಮೊಂಡಾಲ್, ಲ್ಯು ಯೆನ್ ಅಹ್ಮದ್, ಅಲ್ ಮಾಮುನ್ ಕಮಲ್ ಮತ್ತು ಅತಿತೂರ್ ರೆಹಮಾನ್ ಮುರ್ಷಿದಾಬಾದ್ ನಿವಾಸಿಗಳಾಗಿದ್ದಾರೆ. ಸುಫಿಯಾನ್ ಮನೆಯಲ್ಲಿ ಕಚ್ಚಾ ಐಇಡಿ, ಸ್ವಿಚ್‌ಗಳು, ಬ್ಯಾಟರಿಗಳನ್ನು ಜಪ್ತಿ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತರನ್ನು ಎರ್ನಾಕುಲಂ ಮತ್ತು ಮುರ್ಷಿದಾಬಾದ್ ಕೋರ್ಟ್‌ಗೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಎನ್‌ಐಎ ವಶಕ್ಕೆ ನೀಡುವಂತೆ ಕೇಳಲಿದೆ.