ಜೈಪುರ: ಭಾರತೀಯ ಸೇನೆಯ ಸಮವಸ್ತ್ರ ಧರಿಸಲು ಸಂಪೂರ್ಣ ಅರ್ಹರಾಗಿದ್ದಾರೆ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ ಎಂದು ಹುತಾತ್ಮ ಯೋಧ ಕರ್ನಲ್ ಅಶುತೋಷ್ ಶರ್ಮಾ ಪತ್ನಿ ಪಲ್ಲವಿ ಶರ್ಮಾ ಪತಿಯ ಶೌರ್ಯವನ್ನು ಕೊಂಡಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಮೇ 3 ರಂದು ಉಗ್ರವಾದಿಗಳೊಂದಿಗೆ ನಡೆದ ಕಾದಾಟದಲ್ಲಿ ಕರ್ನಲ್ ಅಶುತೋಷ್ ಶರ್ಮಾ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದರು.
"ದೇಶ ಸೇವೆಗಾಗಿ ಸೇನಾ ಸಮವಸ್ತ್ರ ಧರಿಸುವುದು ಅವರ ಕನಸಾಗಿತ್ತು. ಸೇನೆಯ ಉನ್ನತ ಸ್ಥಾನಕ್ಕೇರಲು ಅವರು ಅಪಾರ ಪರಿಶ್ರಮ ಪಟ್ಟಿದ್ದರು. ಕಳೆದ 20 ವರ್ಷಗಳ ಸೇವಾವಧಿಯಲ್ಲಿ ತಮ್ಮ ಸಾಮರ್ಥ್ಯವನ್ನು ಹಲವಾರು ಬಾರಿ ಪ್ರದರ್ಶಿಸಿದ್ದರು. ಸೇನಾ ಸಮವಸ್ತ್ರ ಧರಿಸಲು ತಾನು ಸಂಪೂರ್ಣ ಅರ್ಹತೆ ಪಡೆದಿದ್ದೆ ಎಂಬುದನ್ನು ಅಶುತೋಷ್ ಈ ಬಾರಿಯೂ ಸಾಬೀತು ಪಡಿಸಿದ್ದಾರೆ." ಎಂದು ಕರ್ನಲ್ ಅಶುತೋಷ್ ಪತ್ನಿ ಪಲ್ಲವಿ ಈಟಿವಿ ಭಾರತನೊಂದಿಗೆ ಮನದಾಳದ ಮಾತು ಹಂಚಿಕೊಂಡರು.
ಕೆಟ್ಟ ವರ್ತಮಾನ ಬರುವ ಬಗ್ಗೆ ನಿಮಗೆ ಅನುಮಾನವೇನಾದರೂ ಬಂದಿತ್ತೇ ಎಂಬ ಪ್ರಶ್ನೆಗೆ, "ಬಹಳ ಸಮಯದವರೆಗೆ ಅವರಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದಾಗ ಎಲ್ಲವೂ ಸರಿಯಿಲ್ಲ ಅನಿಸಿದ್ದುಂಟು. ಕೊನೆಗೆ ಬೆಳಗ್ಗೆ 9 ಕ್ಕೆ ಅವರು ಹುತಾತ್ಮರಾದ ಸುದ್ದಿ ಬಂದಿತು." ಎಂದು ಉತ್ತರಿಸಿದರು.
"ಅಶುತೋಷ್ ಯಾವಾಗಲೂ ಮುಂಚೂಣಿಯಲ್ಲಿ ನಿಂತು ಹೋರಾಡುವಂಥ ವ್ಯಕ್ತಿ. ತನ್ನ ಸೈನಿಕರ ಪ್ರಾಣ ರಕ್ಷಣೆಗೆ ಎಂಥ ತ್ಯಾಗಕ್ಕೂ ಅವರು ಸಿದ್ಧರಾಗುತ್ತಿದ್ದರು. ಇಂಥದ್ದೇನಾದರೂ ದುರದೃಷ್ಟಕರ ಘಟನೆ ನಡೆಯಬಹುದು ಎಂದು ಕೆಲ ಬಾರಿ ಅನಿಸಿತ್ತು. ಈ ರೀತಿಯ ಹಲವಾರು ಮಿಲಿಟರಿ ಕಾರ್ಯಾಚರಣೆಗಳನ್ನು ಅವರು ಸಮರ್ಥವಾಗಿ ಜಯಿಸಿದ್ದರು. ಆದರೆ ಈ ಬಾರಿ ಸಂದರ್ಭ, ಸಮಯಗಳು ಅನುಕೂಲಕರವಾಗಿರಲಿಲ್ಲ." ಎಂದು ಪಲ್ಲವಿ ಭಾವುಕರಾಗಿ ನುಡಿದರು.