ಲಕ್ನೊ (ಉತ್ತರ ಪ್ರದೇಶ): ದೆಹಲಿಯಲ್ಲಿ ಧಾರ್ಮಿಕ ಸಮಾವೇಶ ನಡೆಸುವ ಮೂಲಕ ಕೊರೊನಾ ವೈರಸ್ ವ್ಯಾಪಕವಾಗಿ ಹರಡಲು ಕಾರಣವಾದ ತಬ್ಲಿಗಿ ಜಮಾತ್ ವರ್ತನೆಗೆ ಎಲ್ಲೆಡೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ.
ಶಿಯಾ ಹಾಗೂ ಸುನ್ನಿ ಸಮುದಾಯದ ಮುಖಂಡರು ತಬ್ಲಿಗಿಗಳನ್ನು ಖಂಡಿಸುತ್ತಿದ್ದಾರಾದರೂ ಅವರ ಮಾತುಗಳು ಒಂದೇ ತೆರನಾಗಿಲ್ಲ ಎಂಬುದನ್ನು ಗಮನಿಸಬೇಕಿದೆ. ಧರ್ಮದ ಇತರ ಮುಖಂಡರೊಂದಿಗೆ ತಾವು ವೈಯಕ್ತಿಕವಾಗಿ ಹೊಂದಿರುವ ಸಂಬಂಧವನ್ನು ಆಧರಿಸಿ ಈ ಖಂಡನೆಗಳು ತೀವ್ರ ಅಥವಾ ಸೌಮ್ಯವಾಗಿರುವುದು ಕಂಡು ಬರುವ ಸಂಗತಿಯಾಗಿದೆ.
ಉದಾಹರಣೆಗೆ ನೋಡುವುದಾದರೆ, ತಬ್ಲಿಗಿ ಜಮಾತ್ ಉದ್ದೇಶಪೂರ್ವಕವಾಗಿ ತನ್ನ ಅನುಯಾಯಿಗಳು ಸೋಂಕಿತರಾಗುವಂತೆ ಮಾಡಿದೆ ಎಂದು ಉತ್ತರ ಪ್ರದೇಶ ಶಿಯಾ ವಕ್ಫ್ ಬೋರ್ಡ್ ಮುಖ್ಯಸ್ಥ ವಸೀಮ್ ರಿಜ್ವಿ ಹೇಳಿದ್ದು, ಇವರ ಈ ಮನಸ್ಥಿತಿಗೆ ಸಾವಿನ ಶಿಕ್ಷೆಯೇ ಆಗಬೇಕು. ಅದಕ್ಕಿಂತ ಕಡಿಮೆ ಯಾವುದಕ್ಕೂ ಅವರು ಅರ್ಹರಲ್ಲ ಎಂದು ಅವರು ಆಗ್ರಹಿಸಿದ್ದಾರೆ.
ಮತ್ತೊಬ್ಬ ಮುಖಂಡ ಮೌಲಾನಾ ಕಲ್ಬೆ ಜವಾದ್ ಮಾತ್ರ ಈ ಬಗ್ಗೆ ಏನೂ ಹೇಳದೆ ಮೌನವಾಗಿದ್ದರು. ವಸೀಮ್ ರಿಜ್ವಿ ಅವರೊಂದಿಗೆ ಕಲ್ಬೆ ಸಂಬಂಧ ಅಷ್ಟಕ್ಕಷ್ಟೆ ಎಂಬುದು ಗೊತ್ತಿರುವ ವಿಷಯ.
ತಬ್ಲೀಘಿ ಕುರಿತು ಕಲ್ಬೆ ಅವರಿಗೆ ಪ್ರಶ್ನೆ ಮಾಡಿದಾಗ, 'ತಬ್ಲಿಗಿ ಜಮಾತ್ ಸಮಾವೇಶವನ್ನು ಆಯೋಜಿಸಬಾರದಿತ್ತು. ಇದಕ್ಕೆ ಕಾರಣರಾದವರಿಗೆ ಶಿಕ್ಷೆಯಾಗಲಿ' ಎಂದರು.
ಕೇಂದ್ರ ಮಂತ್ರಿ ಹಾಗೂ ಶಿಯಾ ಮುಖಂಡ ಮುಕ್ತಾರ ಅಬ್ಬಾಸ್ ನಕ್ವಿ ಈ ಕುರಿತು ಟ್ವೀಟ್ ಮಾಡಿದ್ದು, 'ತಬ್ಲಿಗಿ ಜಮಾತ್ ಮಾಡಿದ್ದು ತಾಲಿಬಾನಿ ಅಪರಾಧ. ಇದು ಬೇಜವಾಬ್ದಾರಿ ಮಾತ್ರವಲ್ಲ. ಇದೊಂದು ಗಂಭೀರ ಅಪರಾಧ ಪ್ರಕರಣ. ಇಡೀ ದೇಶ ಕೊರೊನಾ ವಿರುದ್ಧ ಹೋರಾಡುವಾಗ ಇಂಥ ಪಾಪದ ಕೃತ್ಯವೆಸಗಿರುವುದು ಕ್ಷಮೆಗೆ ಅರ್ಹವಲ್ಲ' ಎಂದಿದ್ದಾರೆ.
ತಬ್ಲೀಘಿ ಜಮಾತ್ ಮೂಲಭೂತವಾದಿ ಸಂಘಟನೆಯಾಗಿದೆ. ದೇಶವಿರೋಧಿ ಕೆಲಸ ಮಾಡುತ್ತಿರುವ ಈ ಸಂಘಟನೆಯನ್ನು ನಿಷೇಧಿಸಬೇಕೆಂದು ಉತ್ತರ ಪ್ರದೇಶ ಸಚಿವ, ಶಿಯಾ ಮುಖಂಡ ಮೊಹ್ಸಿನ್ ರಝಾ ಹೇಳಿದ್ದಾರೆ.
ಸುನ್ನಿ ಧರ್ಮಗುರು ಮೌಲಾನಾ ಖಾಲಿದ್ ರಶೀದ ಫಿರಂಗಿ ಮಹಾಲಿ ಸಾಮಾನ್ಯವಾಗಿ ವಿವಾದಾಸ್ಪದ ವಿಷಯಗಳಲ್ಲಿ ಮಾತನಾಡುವುದಿಲ್ಲ. ಆದರೆ ಈ ಬಾರಿ ಅವರು ತಬ್ಲೀಘಿ ಸಮಾವೇಶವನ್ನು ಖಂಡಿಸಿದ್ದು, ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಇನ್ನು ಬರೇಲಿಯ ದರ್ಗಾ ಆಲಾ ಹಜರತ್ ಈಗಾಗಲೇ ತಬ್ಲೀಘಿ ನಿಷೇಧಿಸುವಂತೆ ಆಗ್ರಹಿಸಿದೆ.