ನವದೆಹಲಿ: ಲಾಕ್ಡೌನ್ ವೇಳೆ ಆರ್ಥಿಕ ಚಟುವಟಿಕೆ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದ ಕಾರಣ ಎಲ್ಲರೂ ಇನ್ನಿಲ್ಲದ ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ. ಆದರೆ ರಿಲಯನ್ಸ್ ಇಂಡಸ್ಟ್ರೀ ಅಧ್ಯಕ್ಷ ಮುಖೇಶ್ ಅಂಬಾನಿ ಮಾತ್ರ ಪ್ರತಿ ಗಂಟೆಗೆ 90 ಕೋಟಿ ರೂ.ಗಳಿಕೆ ಮಾಡಿದ್ದಾರೆ.
ವಿಶ್ವದ ಐದನೇ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮುಖೇಶ್ ಅಂಬಾನಿ ಸದ್ಯ ಸತತ 9ನೇ ವರ್ಷವೂ ಭಾರತದ ಶ್ರೀಮಂತ ವ್ಯಕ್ತಿ ಆಗಿ ಹೊರಹೊಮ್ಮಿದ್ದು, ಇವರ ಒಟ್ಟು ಆಸ್ತಿ 6,58,400 ಕೋಟಿ ರೂ. ಇದೆ ಎಂದು ತಿಳಿದು ಬಂದಿದೆ.
ಹುರುನ್ ಇಂಡಿಯಾ ಮತ್ತು ಐಐಎಓಎಲ್ ವೆಲ್ತ್ ಮ್ಯಾನೇಜ್ಮೆಂಟ್ ಲಿಮಿಟೆಡ್ ಈ ವರದಿ ನೀಡಿದ್ದು, 2020ರ ಆಗಸ್ಟ್ ಅಂತ್ಯದ ವೇಳೆಗೆ ದೇಶದ 828 ವ್ಯಕ್ತಿಗಳ ಬಳಿ 1,000 ಕೋಟಿ ಆಸ್ತಿ ಇದೆ ಎಂದು ತಿಳಿಸಿದೆ. ಇದು ಭಾರತದ ಜಿಡಿಪಿಯ ಮೂರನೇ ಒಂದು ಭಾಗಕ್ಕೆ ಸಮನಾಗಿದ್ದು, ಪಾಕ್, ಬಾಂಗ್ಲಾ,ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಭೂತಾನದ ಒಟ್ಟು ಜಿಡಿಪಿಗಿಂತಲೂ ಹೆಚ್ಚಿನದಾಗಿದೆ.
9ನೇ ವರ್ಷವು ಟಾಪ್ 1ರಲ್ಲಿ ಮುಂದುವರೆದಿರುವ ಮುಖೇಶ್ ಅಂಬಾನಿ ಕಳೆದ 12 ತಿಂಗಳಲ್ಲಿ ಶೇ.73ರಷ್ಟು ಆಸ್ತಿ ವೃದ್ಧಿಸಿಕೊಂಡಿದ್ದಾಗಿ ತಿಳಿದು ಬಂದಿದೆ. ಅಂಬಾನಿ ಬಳಿಕ ಹಿಂದೂಜಾ ಬ್ರದರ್ಸ್ ಇದ್ದಾರೆ. ಇವರ ಒಟ್ಟು ಆಸ್ತಿ 1.43 ಲಕ್ಷ ಕೋಟಿ ಆಗಿದೆ. ಮೂರನೇ ಸ್ಥಾನದಲ್ಲಿ 1.41 ಲಕ್ಷ ಕೋಟಿದೊಂದಿಗೆ ಎಚ್ಸಿಎಲ್ ಸಂಸ್ಥಾಪಕ ಶಿವ ನಾಡರ್ ಇದ್ದು, ನಂತರದ ಸ್ಥಾನದಲ್ಲಿ 1.40 ಲಕ್ಷ ಕೋಟಿ ಹೊಂದಿರುವ ಗೌತಮ್ ಅದಾನಿ ಹಾಗೂ 1.14 ಲಕ್ಷ ಕೋಟಿ ಹೊಂದಿರುವ ಅಜೀಮ್ ಪ್ರೇಮ್ಜಿ ಐದನೇ ಸ್ಥಾನದಲ್ಲಿದ್ದಾರೆ.
ಅವೆನ್ಯೂ ಸೂಪರ್ ಮಾರ್ಟ್ಗಳ ಸ್ಥಾಪಕ ರಾಧಾ ಕಿಶನ್ ದಮಾನಿ ಇದೀಗ ಟಾಪ್ 10ರ ಪಟ್ಟಿಯಲ್ಲಿ ಹೊಸದಾಗಿ ಕಾಣಿಸಿಕೊಂಡಿದ್ದಾರೆ. ಇವರ ಒಟ್ಟು ಆಸ್ತಿ 87, 200 ಕೋಟಿ ರೂ ಆಗಿದೆ.