ಅನುಪುರ(ಮಧ್ಯಪ್ರದೇಶ): ಕಟ್ಟಿಕೊಂಡ ಗಂಡನ ಕೊಲೆಗೈದ ಪಾಪಿ ಹೆಂಡತಿ ಮನೆಯಲ್ಲೇ ಸಮಾಧಿ ಮಾಡಿ ಯಾರಿಗೂ ಸಂದೇಹ ಬಾರದ ರೀತಿ ಅದರ ಮೇಲೆ ಕಿಚನ್ ನಿರ್ಮಾಣ ಮಾಡಿರುವ ಘಟನೆ ಮಧ್ಯಪ್ರದೇಶದ ಅನುಪುರದಲ್ಲಿ ನಡೆದಿದೆ.
ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಪೊಲೀಸರು ಇದೀಗ ಕಾರ್ಯಾಚರಣೆ ನಡೆಸಿ ನಿಜಾಂಶ ಬಹಿರಂಗಪಡಿಸಿದ್ದಾರೆ. ವೃತ್ತಿಯಲ್ಲಿ ಲಾಯರ್ ಆಗಿದ್ದ 34 ವರ್ಷದ ಗಂಡ ಮೋಹಿತ್ನನ್ನ ಕೊಲೆ ಮಾಡಿರುವ ಹೆಂಡತಿ, ಯಾರಿಗೂ ಸಂದೇಹ ಬಾರದಂತೆ ಆತನ ಮೃತದೇಹವನ್ನ ಮನೆಯಲ್ಲೇ ಸಮಾಧಿ ಮಾಡಿದ್ದು, ಅದರ ಮೇಲೆ ಕಿಚನ್ ನಿರ್ಮಿಸಿದ್ದಾಳೆ. ಇದಾದ ಬಳಿಕ ಆತ ಕಾಣೆಯಾಗಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಕೊಲೆಯಾದ ಮೋಹಿತ್ ಸಹೋದರ ಅರ್ಜುನ್ ಸಂಶಯ ವ್ಯಕ್ತಪಡಿಸಿ, ಹೆಚ್ಚಿನ ಮಾಹಿತಿ ಪಡೆದುಕೊಳ್ಳುವ ಉದ್ದೇಶದಿಂದ ಅಣ್ಣನ ಹೆಂಡತಿ ಮನೆಗೆ ಬಂದಾಗ ಮನೆಯೊಳಗೆ ಬಿಡದೇ ಆತನೊಂದಿಗೆ ಜಗಳವಾಡಿದ್ದಳು. ಇದರಿಂದ ಮತ್ತಷ್ಟು ಶಂಕೆ ವ್ಯಕ್ತಪಡಿಸಿ ಆಕೆ ಮನೆಯಲ್ಲಿ ಇಲ್ಲದ ವೇಳೆ ಕೀ ಮುರಿದು ಗೆಳೆಯರೊಂದಿಗೆ ಮನೆಯೊಳಗೆ ಹೋಗಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಹೊಸದಾಗಿ ನಿರ್ಮಾಣಗೊಂಡಿದ್ದ ಕಿಚನ್ ಅಗೆದು ನೋಡಿದಾಗ ಅಣ್ಣನ ಮೃತದೇಹ ಪತ್ತೆಯಾಗಿದೆ.
ಈಗಾಗಲೇ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದ್ದು, ಮಹಿಳೆಯ ಬಂಧನ ಮಾಡಿ ಹೆಚ್ಚಿನ ವಿಚಾರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.