ಭೋಪಾಲ್(ಮಧ್ಯಪ್ರದೇಶ): ದೆಹಲಿಯಿಂದ ಭೋಪಾಲ್ ವಿಮಾನದ ಸೀಟ್ ಬುಕ್ ಮಾಡಿದ್ದ ತಮಗೆ ಕಾಯ್ದಿರಿಸಿದ್ದ ಸೀಟ್ ನೀಡಲಿಲ್ಲವೆಂದು ಆರೋಪಿಸಿ ದೂರು ನೀಡಿದ್ದ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್, ಪ್ರಯಾಣಿಕರೊಂದಿಗೆ ವಾಗ್ವಾದ ನಡೆಸಿರುವ ವಿಡಿಯೋ ವೈರಲ್ ಆಗಿದೆ.
2 ದಿನಗಳ ಹಿಂದೆ ನವದೆಹಲಿಯಿಂದ ಭೋಪಾಲ್ಗೆ ಎಸ್‌ಜಿ 2489 ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿದ್ದ ಸಾಧ್ವಿ ಪ್ರಜ್ಞಾ ಸಿಂಗ್ ತಾವು ಬುಕ್ ಮಾಡಿದ್ದ ಸೀಟ್ ನೀಡಲಿಲ್ಲವೆಂದು ವಿಮಾನ ಸಿಬ್ಬಂದಿಯನ್ನ ತರಾಟೆಗೆ ತಗೆದುಕೊಂಡಿದ್ದಾರೆ. ಈ ವೇಳೆ ವಿಮಾನ ಹೊರಡುವುದೂ ಕೂಡ ತಡವಾಗಿದೆ.
ಸಂಸದೆ, ಸಿಬ್ಬಂದಿಯೊಂದಿಗೆ ವಾದ ಮಾಡುತ್ತಿರುವುದರಿಂದ ವಿಮಾನ ಹೊರಡುವುದು ತಡವಾಯಿತೆಂದು ಪ್ರಯಾಣಿಕರು ಸಾಧ್ವಿ ಪ್ರಜ್ಞಾ ಸಿಂಗ್ ಅವರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ಒಬ್ಬ ಜನಪ್ರತಿನಿಧಿಯಾಗಿದ್ದೀರ. ಜನರಿಗೆ ತೊಂದರೆ ಕೊಡುವುದು ನಿಮ್ಮ ಕೆಲಸವಲ್ಲ. ಬೇಕಾದರೆ ಈ ವಿಮಾನದಿಂದ ಇಳಿದು ಮುಂದಿನ ವಿಮಾನದಲ್ಲಿ ಬನ್ನಿ ಎಂದು ಪ್ರಯಾಣಿಕರೊಬ್ಬರು ಸಾಧ್ವಿ ಪ್ರಜ್ಞಾ ಸಿಂಗ್ ಅವರಿಗೆ ಹೇಳಿದ್ದಾರೆ.
ಘಟನೆ ನಂತರ ಪ್ರಜ್ಞಾ ಠಾಕೂರ್ ರಾಜ ಭೋಜ್ ವಿಮಾನ ನಿಲ್ದಾಣದ ನಿರ್ದೇಶಕರಿಗೆ ಈ ಬಗ್ಗೆ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಅವರು, ಪ್ರಯಾಣಿಕರೊಂದಿಗೆ ವಿಮಾನ ಸಿಬ್ಬಂದಿ ಸರಿಯಾಗಿ ವರ್ತಿಸುವುದಿಲ್ಲ. ನಾನು ಕಾಯ್ದಿರಿಸಿದ್ದ ಸೀಟ್ನ್ನು ನನಗೆ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.