ನರಸಿಂಗ್‌ಪುರ (ಮಧ್ಯಪ್ರದೇಶ): ನಾಲ್ಕು ದಿನಗಳ ಹಿಂದೆ ಮೂವರಿಂದ ಅತ್ಯಾಚಾರಕ್ಕೊಳಗಾದ 32 ವರ್ಷದ ದಲಿತ ಮಹಿಳೆ ಮಧ್ಯಪ್ರದೇಶದ ನರಸಿಂಗ್‌ಪುರ ಜಿಲ್ಲೆಯಲ್ಲಿ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಮೂರು ದಿನಗಳಲ್ಲಿ ಪೊಲೀಸರು ದೂರು ದಾಖಲಿಸಿಲ್ಲ ಎಂದು ಮಹಿಳೆಯ ಕುಟುಂಬ ಆರೋಪಿಸಿದೆ. ಅತ್ಯಾಚಾರ ಎಸಗಿದವರು ಸೇರಿದಂತೆ ಮೂವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸ್ಥಳೀಯ ಪೊಲೀಸ್ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಆದೇಶಿಸಿದ್ದಾರೆ.
ಗೋಟಿಟೋರಿಯಾ ಪೊಲೀಸ್ ಔಟ್ ಪೋಸ್ಟ್‌ನ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಮಿಶ್ರಿಲಾಲ್ ಕೊಡಾಪ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ ಎಂದು ಗದರ್ವಾರಾ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಎಸ್.ಆರ್.ಯಾದವ್ ತಿಳಿಸಿದ್ದಾರೆ.
"ಸಂತ್ರಸ್ತೆಯ ಸಮುದಾಯಕ್ಕೆ ಸೇರಿದ ಅರವಿಂದ್ ಮತ್ತು ಪಾರ್ಸು ಚೌಧರಿ ಹಾಗೂ ಇನ್ನೊಬ್ಬ ಆರೋಪಿ ಅನಿಲ್ ರೈ ವಿರುದ್ಧ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿದ್ದೇವೆ" ಎಂದು ಯಾದವ್ ಮಾಹಿತಿ ನೀಡಿದ್ದಾರೆ.
"ಅರವಿಂದ ಚೌಧರಿಯನ್ನು ಬಂಧಿಸಲಾಗಿದ್ದು, ಉಳಿದ ಇಬ್ಬರಿಗಾಗಿ ಶೋಧ ಕಾರ್ಯ ಪ್ರಾರಂಭಿಸಲಾಗಿದೆ" ಎಂದು ಅವರು ಹೇಳಿದರು.
ಸೋಮವಾರ ದನಗಳಿಗೆ ಹುಲ್ಲು ತರಲು ಮಹಿಳೆ ಹೊಲಕ್ಕೆ ಹೊರಟಿದ್ದಾಗ ಮೂವರು ಅತ್ಯಾಚಾರ ಎಸಗಿದ್ದರು.