ನವದೆಹಲಿ: ಸಿಎಂ ಕಮಲ್ ವಿಶ್ವಾಸ ಮತಯಾಚನೆ ಮಾಡಲು, ನಾಳೆಯೇ ವಿಶೇಷ ಅಧಿವೇಶನ ಕರೆಯುವಂತೆ ಮಧ್ಯಪ್ರದೇಶ ವಿಧಾನಸಭೆ ಸ್ಪೀಕರ್ ಎನ್ ಪಿ ಪ್ರಜಾಪತಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು, ಸಂಜೆ 5 ಗಂಟೆಯೊಳಗೆ ಬಹುಮತ ಸಾಬೀತು ಪ್ರಕ್ರಿಯೆ ಮುಕ್ತಾಯಗೊಳಿಸುವಂತೆ ಸೂಚಿಸಿದೆ. ಅಲ್ಲದೇ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿಶ್ವಾಸ ಮತ ಯಾಚನೆ ನಡೆಸುವಾಗ ಅದರ ವಿಡಿಯೋ ರೆಕಾರ್ಡಿಂಗ್ ಮತ್ತು ಸದನದ ಕಲಾಪದ ನೇರ ಪ್ರಸಾರ ಮಾಡಲು ಆದೇಶಿಸಿದೆ.
ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರನ್ನೂ ಒಳಗೊಂಡ ನ್ಯಾಯಪೀಠ, ಕಾಂಗ್ರೆಸ್ನ 16 ಬಂಡಾಯ ಶಾಸಕರು ವಿಶ್ವಾಸ ಮತಯಾಚನೆ ವೇಳೆ ವಿಧಾನಸಭೆಯಲ್ಲಿ ಹಾಜರಾಗುವ ಇಚ್ಛೆ ತೋರಿದರೆ, ಅವರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಮಧ್ಯಪ್ರದೇಶ ಮತ್ತು ಕರ್ನಾಟಕ ಪೊಲೀಸ್ ಮುಖ್ಯಸ್ಥರಿಗೆ ನಿರ್ದೇಶನ ನೀಡಿದ್ದಾರೆ.
ಸದನದಲ್ಲಿ ವಿಶ್ವಾಸ ಮತಯಾಚನೆ ಒಂದೇ ಹಂತದ ಕಾರ್ಯಸೂಚಿಯನ್ನು ಹೊಂದಿರಬೇಕು ಮತ್ತು ಯಾರಿಗೂ ಯಾವುದೇ ಅಡೆತಡೆಗಳನ್ನು ಸೃಷ್ಟಿಸಬಾರದು ಎಂದು ನ್ಯಾಯಪೀಠ ಆದೇಶಿಸಿದೆ. ಅಲ್ಲದೇ ಕಾನೂನು ಸುವ್ಯವಸ್ಥೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವಂತೆ ರಾಜ್ಯ ವಿಧಾನಸಭಾ ಕಾರ್ಯದರ್ಶಿಗೆ ನಿರ್ದೇಶನ ನೀಡಿದೆ.
ನಿನ್ನೆಯಷ್ಟೇ ಬಂಡಾಯ ಕಾಂಗ್ರೆಸ್ ಶಾಸಕರೊಂದಿಗೆ ವಿಡಿಯೋ ಲಿಂಕ್ ಮೂಲಕ ಸಂವಹನ ನಡೆಸಬೇಕು ಅಥವಾ ಶಾಸಕರು ಸೆರೆಯಲ್ಲಿದ್ದಾರೆಯೇ ಎಂಬ ಭಯವನ್ನು ಹೋಗಲಾಡಿಸಲು ನ್ಯಾಯಾಲಯವು ವೀಕ್ಷಕರನ್ನು ನೇಮಿಸಬಹುದು ಎಂದು ಸುಪ್ರೀಂಕೋರ್ಟ್ ಸ್ಪೀಕರ್ಗೆ ಸೂಚಿಸಿತ್ತು. ಆದರೆ, ಈ ಪ್ರಸ್ತಾಪವನ್ನು ಸ್ವೀಕರಿಸಲು ಸ್ಪೀಕರ್ ನಿರಾಕರಿಸಿದ್ದರು.