ಭೋಪಾಲ್: ಮಧ್ಯಪ್ರದೇಶದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರೆದಿದೆ. ಜೈಪುರದ ರೆಸಾರ್ಟ್ ವೊಂದರಲ್ಲಿ ನೆಲೆಸಿದ್ದ ಕಾಂಗ್ರೆಸ್ ಶಾಸಕರು ಇಂದು ಜೈಪುರದಿಂದ ಭೋಪಾಲ್ಗೆ ಪ್ರಯಾಣ ಬೆಳೆಸಿದ್ದಾರೆ. ಇವರಿಗೆ ಹಿರಿಯ ಕಾಂಗ್ರೆಸ್ ಮುಖಂಡ ಹರೀಶ್ ರಾವತ್ ಸಾಥ್ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಹರೀಶ್ ರಾವತ್, ನಾವು ಎದೆಗುಂದಿಲ್ಲ, ನಾಳೆ ಬಹುಮತ ಸಾಬೀತುಪಡಿಸಲು ಸಿದ್ಧರಾಗಿದ್ದೇವೆ ಹಾಗೂ ಇದರಲ್ಲಿ ಗೆಲ್ಲುವ ವಿಶ್ವಾಸ ನಮಗಿದೆ. ಬಂಡಾಯವೆದ್ದಿರುವ ಶಾಸಕರು ಕೂಡ ನಮ್ಮ ಜೊತೆಗಿದ್ದಾರೆ ಎಂದಿದ್ದಾರೆ.
ಇನ್ನೊಂದೆಡೆ ಭೋಪಾಲ್ನಲ್ಲಿ ಕಾಂಗ್ರೆಸ್ ನಾಯಕರಾದ ದಿಗ್ವಿಜಯ್ ಸಿಂಗ್ ಹಾಗೂ ಶೋಭಾ ಓಜಾ ಮಧ್ಯಪ್ರದೇಶ ಸಿಎಂ ಕಮಲನಾಥ್ ನಿವಾಸಕ್ಕೆ ಆಗಮಿಸಿದ್ದಾರೆ. ಕಾಂಗ್ರೆಸ್ ಶಾಸಕರು ಬಂಡಾಯವೆದ್ದಿರುವುದರಿಂದ ಅಸ್ಥಿರತೆ ಎದುರಿಸುತ್ತಿರುವ ಮಧ್ಯಪ್ರದೇಶ ಸರ್ಕಾರಕ್ಕೆ ಗವರ್ನರ್ ಆಗಿರುವ ಲಾಲ್ಜಿ ಟಂಡನ್ ನಾಳೆ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ಹೇಳಿದ್ದಾರೆ.