ಭೋಪಾಲ್: ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಮಧ್ಯಪ್ರದೇಶದ ಸಚಿವ ಸಂಪುಟ ಇಂದು ವಿಸ್ತರಣೆಯಾಗಿದ್ದು, ಜ್ಯೋತಿರಾದಿತ್ಯ ಸಿಂಧಿಯಾರ ಇಬ್ಬರು ಆಪ್ತರು ಮತ್ತೆ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಸಿಂಧಿಯಾ ಆಪ್ತರಾದ ತುಳಸಿರಾಮ್ ಸಿಲಾವತ್ ಮತ್ತು ಗೋವಿಂದ್ ರಜಪೂತ್ ಅವರಿಗೆ ರಾಜ್ಯಪಾಲ ಆನಂದಿಬೆನ್ ಪಟೇಲ್ ಪ್ರತಿಜ್ಞಾ ವಿಧಿ ಬೋಧಿಸಿದರು. ರಾಜಭವನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಹಂಗಾಮಿ ಸ್ಪೀಕರ್ ರಾಮೇಶ್ವರ ಶರ್ಮಾ ಹಾಗೂ ಇತರ ಸಚಿವರು ಉಪಸ್ಥಿತರಿದ್ದರು.
ಕಳೆದ ಮಾರ್ಚ್‌ನಲ್ಲಿ 20ಕ್ಕೂ ಹೆಚ್ಚು ಶಾಸಕರೊಂದಿಗೆ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ತೊರೆದಿದ್ದರಿಂದ ಮಧ್ಯಪ್ರದೇಶದ ಕಮಲ್ ನಾಥ್ ಸರ್ಕಾರ ಪತನವಾಗಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಶಿವರಾಜ್ ಸಿಂಗ್ ಅಧಿಕಾರಕ್ಕೆ ಬಂದ ಬಳಿಕ ಮೂರನೇ ಬಾರಿ ಸಂಪುಟ ವಿಸ್ತರಣೆಯಾದಂತಾಗಿದೆ.
ಇದನ್ನು ಓದಿ: ಎಲ್ಲಿವೆ ಉದ್ಯೋಗಗಳು? ಪಿಎಂ ಮೋದಿ ಉತ್ತರಿಸಲೇಬೇಕು: ವಿಡಿಯೋ ಶೇರ್ ಮಾಡಿ ಕಾಂಗ್ರೆಸ್ ಟ್ವೀಟ್
ಕಳೆದ ಎಪ್ರಿಲ್ನಲ್ಲಿ ಮೊದಲ ಬಾರಿ ಸಂಪುಟ ವಿಸ್ತರಣೆಯಾದಾಗಲೇ ತುಳಸಿರಾಮ್ ಸಿಲಾವತ್ ಮತ್ತು ಗೋವಿಂದ್ ರಜಪೂತ್ಗೆ ಸಚಿವ ಸ್ಥಾನ ನೀಡಲಾಗಿತ್ತು. ಆದರೆ ಕೋವಿಡ್ ಸಾಂಕ್ರಾಮಿಕದಿಂದಾಗಿ ಉಪಚುನಾವಣೆ ವಿಳಂಬವಾಗಿತ್ತು. ಹೀಗಾಗಿ ಇವರು ರಾಜ್ಯ ವಿಧಾನಸಭೆಯ ಸದಸ್ಯರಲ್ಲದ ಕಾರಣ ಅಕ್ಟೋಬರ್‌ನಲ್ಲಿ ಸಚಿವ ಸ್ಥಾನದಿಂದ ಕೆಳಗಿಳಿಯಬೇಕಾಗಿತ್ತು.
ನವೆಂಬರ್ನಲ್ಲಿ ನಡೆದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಸಿಲಾವತ್ ಹಾಗೂ ರಜಪೂತ್, ಇದೀಗ ಮತ್ತೆ ಸಚಿವರಾಗಿ ಮರಳಿದ್ದಾರೆ.