ನವದೆಹಲಿ: ರಾಜ್ಯಸಭೆಯಲ್ಲಿ ಕೃಷಿ ಮಸೂದೆಗಳ ಮಂಡನೆ ವೇಳೆ ಅನುಚಿತವಾಗಿ ವರ್ತಿಸಿ, ಗದ್ದಲ ಸೃಷ್ಟಿಸಿದ್ದ ಸಂಸದರ ವಿರುದ್ಧ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಕ್ರಮ ಜರುಗಿಸುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ರಾಜ್ಯಸಭೆಯ ಕಾರ್ಯವಿಧಾನ ಮತ್ತು ವ್ಯವಹಾರದ ನಿಯಮ 256ರ ಅಡಿಯಲ್ಲಿ ಸಂಸದರ ವಿರುದ್ಧ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿದ್ದು, ಇದರ ಪರವಾಗಿ ಸಭಾಧ್ಯಕ್ಷರು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.
ಕೃಷಿ ಮಸೂದೆಗಳ ಮಂಡನೆ ವೇಳೆ ಗದ್ದಲ ಸೃಷ್ಟಿಸಿದ ವಿಡಿಯೋದ ದೃಶ್ಯಗಳನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿದ್ದು, ಅಂತಿಮ ನಿರ್ಧಾರವನ್ನು ಸಭಾಧ್ಯಕ್ಷರು ತೆಗೆದುಕೊಳ್ಳಲಿದ್ದಾರೆ.
ಭಾನುವಾರ ಮಸೂದೆ ಅಂಗೀಕಾರ ಮಾಡುವ ವೇಳೆ ತೃಣಮೂಲ ಕಾಂಗ್ರೆಸ್ನ ಸಂಸದ ಡೆರೇಕ್ ಓ ಬ್ರಿಯಾನ್, ಕಾಂಗ್ರೆಸ್ ಸಂಸದ ರಿಪುನ್ ಬೋರಾ, ಆಪ್ ಸಂಸದ ಸಂಜಯ್ ಸಿಂಗ್, ಡಿಎಂಕೆ ಸಂಸದ ತಿರುಚಿ ಶಿವ ಹಾಗೂ ಹಲವರು ಡೆಪ್ಯುಟಿ ಚೇರ್ಮನ್ ಹರಿವಂಶ್ ಅವರ ಬಳಿಯಿದ್ದ ಪೋಡಿಯಂನ ಮೈಕ್ ಕಿತ್ತುಕೊಳ್ಳಲು ಯತ್ನಿಸಿದ್ದರು ಹಾಗೂ ಹಾಳೆಗಳನ್ನು ಹರಿದು ಉಪಸಭಾಧ್ಯಕ್ಷರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.