ನವದೆಹಲಿ: ನೈಋತ್ಯ ಮಾನ್ಸೂನ್ ವಾಡಿಕೆಗಿಂತ 2 ವಾರ ಮುಂಚಿತವಾಗಿಯೇ ಇಡೀ ದೇಶವನ್ನು ಆವರಿಸಿದೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ.
ಮಾನ್ಸೂನ್ ಸಾಮಾನ್ಯವಾಗಿ ಜೂನ್ 1 ರಂದು ಕೇರಳಕ್ಕೆ ಆಗಮಿಸುತ್ತದೆ. ಅಲ್ಲಿಂದ ಪಶ್ಚಿಮ ರಾಜಸ್ಥಾನದ ಶ್ರೀಗಂಗಾನಗರವನ್ನು ತಲುಪಲು 45 ದಿನಗಳು ಬೇಕಾಗುತ್ತದೆ. ಇದು ದೇಶದ ಕೊನೆಯ ಔಟ್ಪೋಸ್ಟ್ ಆಗಿದೆ. ಪ್ರತೀ ವರ್ಷ ಜುಲೈ 8ಕ್ಕೆ ಶ್ರೀಗಂಗಾನಗರವನ್ನು ಮಾನ್ಸೂನ್ ತಲುಪುತ್ತಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.
ನೈಋತ್ಯ ಮಾನ್ಸೂನ್ ಮಾರುತಗಳು ರಾಜಸ್ಥಾನ, ಹರಿಯಾಣ ಮತ್ತು ಪಂಜಾಬ್ನ ಉಳಿದ ಭಾಗಗಳಿಗೆ ಮುಂದುವರೆದಿದ್ದು, ಇಂದು (ಜೂನ್ 26) ಇಡೀ ದೇಶವನ್ನು ಆವರಿಸಿವೆ ಎಂದು ಐಎಂಡಿ ತಿಳಿಸಿದೆ. ಬಂಗಾಳಕೊಲ್ಲಿಯ ಮೇಲೆ ಕಡಿಮೆ ಒತ್ತಡದ ಪ್ರದೇಶ ಮತ್ತು ಮಧ್ಯ ಭಾರತದ ಮೇಲೆ ಆಪ್ಪಳಿಸಿದ ಚಂಡಮಾರುತವು ಮಾನ್ಸೂನ್ಗೆ ಸಹಾಯ ಮಾಡಿದೆ.
2013 ರಲ್ಲಿ ಮಾನ್ಸೂನ್ ಜೂನ್ 16 ರಂದು ಇಡೀ ದೇಶವನ್ನು ಆವರಿಸಿತ್ತು. ಆಗ ಉತ್ತರಾಖಂಡದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದು ಜಲ ಪ್ರಳಯ ಉಂಟಾಗಿತ್ತು. ನೈಋತ್ಯ ಮಾನ್ಸೂನ್ 2013 ರ ನಂತರ, ಪ್ರಥಮ ಬಾರಿಗೆ ಈ ವರ್ಷ ವೇಗವಾಗಿ ಇಡೀ ದೇಶವನ್ನು ಆವರಿಸಿದೆ ಎಂದು ಹವಾಮಾನ ಇಲಾಖೆ ಮಹಾನಿರ್ದೇಶಕ ಮೃತುಂಜಯ್ ಮೋಹಪಾತ್ರ ತಿಳಿಸಿದ್ದಾರೆ.