ಗಾಜಿಯಾಬಾದ್ (ಉತ್ತರ ಪ್ರದೇಶ): 'ಸರ್ಕಾರಿ ಕೆಲಸ ಎಂದರೆ ದೇವರ ಕೆಲಸ' ಎಂಬ ಮಾತಿಗೆ ಅಂಟಿಕೊಂಡಂತಿರುವ ಈ ಐಎಎಸ್ ಅಧಿಕಾರಿಯ ಕರ್ತವ್ಯ ನಿಷ್ಠೆ ಸಮಾಜಕ್ಕೆ ಮಾದರಿಯಾಗಿದೆ. ತಮ್ಮ ಸೇವೆಯನ್ನು ಸಮಾಜಕ್ಕೆ ಸಲ್ಲಿಸುವ ಉದ್ದೇಶ ಹೊಂದಿರುವ ಇವರು ಮೂರು ವಾರಗಳ ಮಗುವಿನೊಂದಿಗೆ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಜುಲೈನಲ್ಲಿ ಗಾಜಿಯಾಬಾದ್ ಜಿಲ್ಲೆಯ ಕೋವಿಡ್ ನೋಡಲ್ ಅಧಿಕಾರಿಯಾಗಿ ನೇಮಕಗೊಂಡಿದ್ದ ಮೋದಿನಗರ ಉಪವಿಭಾಗ ಮ್ಯಾಜಿಸ್ಟ್ರೇಟ್ ಸೌಮ್ಯಾ ಪಾಂಡೆ ಅವರು ಹೆರಿಗೆಯ ಹದಿನೈದು ದಿನಗಳ ನಂತರ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
'ನಾನು ಐಎಎಸ್ ಅಧಿಕಾರಿ. ಹಾಗಾಗಿ ನನ್ನ ಕರ್ತವ್ಯವನ್ನು ನಾನು ನಿರ್ವಹಿಸಲೇಬೇಕು. ಕೋವಿಡ್ -19 ಕಾರಣದಿಂದಾಗಿ ಪ್ರತಿಯೊಬ್ಬರ ಹೆಗಲ ಮೇಲಿರುವ ಜವಾಬ್ದಾರಿ ಹೆಚ್ಚಾಗಿದೆ. ದೇವರು ಮಗುವಿಗೆ ಜನ್ಮ ನೀಡುವ ಮತ್ತು ಮಗುವನ್ನು ನೋಡಿಕೊಳ್ಳುವ ಶಕ್ತಿಯನ್ನು ನನಗೆ ನೀಡಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ಮಹಿಳೆಯರು ಗರ್ಭಧಾರಣೆಯ ಸಮಯದಲ್ಲಿ ಕೆಲಸವನ್ನು ಮಾಡುತ್ತಾರೆ. ಹೆರಿಗೆಯಾದ ನಂತರ ಅವರು ಮಗುವನ್ನು ನೋಡಿಕೊಳ್ಳುತ್ತಾರೆ. ಅವರ ಕೆಲಸ ಮತ್ತು ಮನೆ ಎರಡನ್ನೂ ಸಹ ನಿರ್ವಹಿಸುತ್ತಾರೆ. ಅಂತೆಯೇ, ದೇವರ ಆಶೀರ್ವಾದದಿಂದ ನನಗೂ ನನ್ನ ಮೂರು ವಾರಗಳ ಹೆಣ್ಣು ಮಗುವಿನೊಂದಿಗೆ ಕಚೇರಿ ಕೆಲಸವನ್ನು ಮಾಡಲು ಸಾಧ್ಯವಾಗುತ್ತದೆ' ಎಂದು ಸೌಮ್ಯಾ ಪಾಂಡೆ ಹೇಳಿದ್ದಾರೆ.
'ನನ್ನ ಕುಟುಂಬವು ಇದರಲ್ಲಿ ನನಗೆ ಸಾಕಷ್ಟು ಬೆಂಬಲ ನೀಡಿದೆ. ನನ್ನ ಜಿಲ್ಲಾಡಳಿತವು ನನಗೆ ಒಂದು ಕುಟುಂಬದಂತೆ. ಗರ್ಭಧಾರಣೆ ಮತ್ತು ಹೆರಿಗೆಯ ನಂತರದ ಸಮಯದಲ್ಲಿ ನನಗೆ ಬೆಂಬಲ ನೀಡಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಆಡಳಿತದ ಸಿಬ್ಬಂದಿ ನನ್ನ ಗರ್ಭಧಾರಣೆಯ ಅವಧಿಯುದ್ದಕ್ಕೂ ನನಗೆ ಬೆಂಬಲ ನೀಡಿದರು' ಎಂದು ತಮ್ಮ ಸಿಬ್ಬಂದಿ ವರ್ಗಕ್ಕೆ ಕೃತಜ್ಞತೆ ತಿಳಿಸಿದ್ದಾರೆ.