ನವದೆಹಲಿ: ತಿಂಗಳೊಳಗೆ 2.0 ಮೋದಿ ಸರ್ಕಾರದ ಮೊದಲನೇ ಪೂರ್ಣ ಪ್ರಮಾಣದ ಬಜೆಟ್ ಮಂಡನೆಯ ಸಿದ್ಧತೆಗಳು ಹಣಕಾಸು ಸಚಿವಾಲಯ ಕಚೇರಿಯ ನಾರ್ತ್ ಬ್ಲಾಕ್ನಲ್ಲಿ ಭರದಿಂದ ಸಾಗುತ್ತಿದೆ. ಈ ನಿಟ್ಟಿನಲ್ಲಿ ಜನಸಾಮಾನ್ಯರ ಹಾಗೂ ಕಾರ್ಪೊರೇಟ್ ಸಂಸ್ಥೆಗಳ ಮೇಲಿನ ತೆರಿಗೆ ಹೊರೆ ತಗ್ಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇಳಿಮುಖವಾಗುತ್ತಿರುವ ಅರ್ಥವ್ಯವಸ್ಥೆಗೆ ವೇಗೋತ್ಕರ್ಷ ನೀಡಬೇಕು ಎಂದು ಉದ್ಯಮ ವಲಯದ ಪಂಡಿತರು ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ. ರೆವಿನ್ಯೂ ಕಾರ್ಯದರ್ಶಿ, ವಾಣಿಜ್ಯ ಉದ್ಯಮಿಗಳ ಒಕ್ಕೂಟ ಅಸೋಚಮ್ ಸಭೆಯಲ್ಲಿ ವೈಯಕ್ತಿಕ ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆ ಶೇ 25ಕ್ಕೆ ನಿಗದಿ, ಸ್ಟಾರ್ಟಪ್ಗಳಿಗೆ ತೆರಿಗೆ ವಿನಾಯತಿ, ತೆರಿಗೆ ಸುಧಾರಣೆ, ವೈಮಾನಿಕ ಇಂಧನ ಮೇಲಿನ ಸುಂಕದ ಭಾರ ಇಳಿಸಲಿದ್ದಾರೆ ಎಂಬ ಮಾಹಿತಿ ಇದೆ.
ವಾಣಿಜ್ಯ ಕೂಟ ಅಸೋಚಮ್ ಮೋದಿ ಸರ್ಕಾರಕ್ಕೆ ಬರುವ ಬಜೆಟ್ನಲ್ಲಿ ತೆರಿಗೆ ಸ್ಲ್ಯಾಬ್ಗಳಲ್ಲಿ ಬದಲಾವಣೆ ತರುವಂತೆ ಸಲಹೆ ನೀಡಿದೆ. ಕೇಂದ್ರ ಸರ್ಕಾರ ವೆಚ್ಚದ ಹಣದುಬ್ಬರ ಆಧಾರಿತ 'ಸೂಚ್ಯಂಕ'ವನ್ನು ಗಮನದಲ್ಲಿರಿಸಿಕೊಂಡು ತೆರಿಗೆ ಕಡಿತ ಹಾಗೂ ವೈದ್ಯಕೀಯ ಅನುದಾನದತ್ತ ಕೇಂದ್ರೀಕರಿಸಬೇಕು. ಇಂತಹ ನಿರ್ಧಾರಗಳು ವಾಸ್ತವಿಕತೆಗೆ ನೇರವಾಗಿ ತೆರಿಗೆದಾರರ ಮೇಲೆ ಹಣದುಬ್ಬರ ಪ್ರಭಾವವನ್ನು ತಗ್ಗಿಸಲು ಸಹಾಯ ಮಾಡುತ್ತವೆ ಎಂದು ಹೇಳಿದೆ.
ಈ ಹಿಂದೆ ಹಂಗಾಮಿ ವಿತ್ತ ಸಚಿವರಾಗಿದ್ದ ಪಿಯೂಶ್ ಗೋಯಲ್ ಅವರು ಮಧ್ಯಮವರ್ಗದ ಜನರಿಗೆ ದೊಡ್ಡ ತೆರಿಗೆ ರಿಲೀಫ್ ನೀಡಿದ್ದು, ₹ 5 ಲಕ್ಷವರೆಗೂ ಆದಾಯ ಹೊಂದಿರುವವರಿಗೆ ತೆರಿಗೆ ವಿನಾಯಿತಿ ಘೋಷಣೆ ಮಾಡಿದ್ದರು. ನಿರ್ಮಲಾ ಸೀತರಾಮನ್ ಕೂಡ ಇದಕ್ಕೂ ಹೆಚ್ಚಿನ ಮೊತ್ತದ ತೆರಿಗೆ ವಿನಾಯಿತಿ ನಿರ್ಧಾರ ಪ್ರಕಟಿಸುವರೇ? ಎಂದು ಕಾದು ನೋಡಲಾಗುತ್ತಿದೆ.