ನವದೆಹಲಿ: ಸೂಕ್ಷ್ಮ ಮತ್ತು ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಕೇಂದ್ರ ಸರ್ಕಾರದಿಂದ ಘೋಷಿಸಲಾದ 3 ಲಕ್ಷ ಕೋಟಿ ರೂ.ಗಳ ಮುಕ್ತ ಸಾಲ ಸೌಲಭ್ಯವು ಎಂಎಸ್‌ಎಂಇ ವಲಯವನ್ನು ಹುರಿದುಂಬಿಸಲು ವಿಫಲವಾಗಿದೆ ಎಂದು ಫೆಡರೇಷನ್ ಆಫ್ ಇಂಡಿಯನ್ ಎಂಎಸ್‌ಎಂಇ ಅಧ್ಯಕ್ಷ ಅನಿಮೇಶ್ ಸಕ್ಸೇನಾ ಹೇಳಿದ್ದಾರೆ.
ಎರಡು ತಿಂಗಳ ಕಾಲ ರಾಷ್ಟ್ರವ್ಯಾಪಿ ಲಾಕ್ಡೌನ್ ಹೇರಿದ ಕಾರಣದಿಂದಾಗಿ ಎಂಎಸ್‌ಎಂಇ ಕೈಗಾರಿಕೆಗಳು ತೀವ್ರ ಹಣದುಬ್ಬರವನ್ನು ಎದುರಿಸುತ್ತಿದೆ. ಎಸ್‌ಎಂಇಗಳು ಇದೀಗ ಎದುರಿಸುತ್ತಿರುವ ಪ್ರಮುಖ ಬಿಕ್ಕಟ್ಟು ಎಂದರೆ ಅದು ಹಣದುಬ್ಬರವಾಗಿದ್ದು, ಕಳೆದ ಎರಡು ತಿಂಗಳಲ್ಲಿ ಶೂನ್ಯ ಉತ್ಪಾದನೆ ಹಾಗೂ ಮಾರಾಟ, ಇವೆಲ್ಲವುದಕ್ಕೂ ಕಾರಣವಾಗಿದೆ ಎಂದು ಸಕ್ಸೇನಾ ಹೇಳಿದ್ದಾರೆ.
ಕೊರೊನಾ ಪ್ರೇರಿತ ಲಾಕ್ಡೌನ್ ಅವಧಿಯಲ್ಲಿ ಕಾರ್ಮಿಕರಿಗೆ ಸಂಬಳ ನೀಡುವಂತೆ ಗೃಹ ವ್ಯವಹಾರಗಳ ಸಚಿವಾಲಯ ಉದ್ಯೋಗದಾತರಿಗೆ ನಿರ್ದೇಶನ ನೀಡಿದ್ದರಿಂದ ಎಂಎಸ್‌ಎಂಇ ವಲಯದ ಸಮಸ್ಯೆಗಳು ಉಲ್ಬಣಗೊಂಡಿವೆ. ಈ ವರೆಗೆ ಎಂಎಸ್‌ಎಂಇಗಳು ದೇಶದಲ್ಲಿ ಸುಮಾರು 12 ಕೋಟಿ ಜನರಿಗೆ ಉದ್ಯೋಗ ನೀಡಿದೆ. ಇವರೆಲ್ಲರಿಗೂ ಕಾರ್ಯನಿರ್ವಹಿಸದಿದ್ದರೂ ಸಹ ವೇತನ ನೀಡಿರುವುದು ಸಹ ಎಂಎಸ್‌ಎಂಇ ಸಂಕಷ್ಟಕ್ಕೆ ಸಿಲುಕಲು ಕಾರಣವಾಗಿದೆ ಎಂದಿದ್ದಾರೆ.
ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಯಾವುದೇ ವ್ಯವಹಾರವಿಲ್ಲದಿದ್ದರೂ ಸಹ ಸಿಬ್ಬಂದಿ ವೇತನ, ವಿದ್ಯುತ್ ಬಿಲ್‌ಗಳಂತಹ ಎಲ್ಲ ನಿಗದಿತ ವೆಚ್ಚಗಳನ್ನು ನಾವು ನೋಡಿಕೊಳ್ಳಬೇಕಾಗಿದೆ ಎಂದು ಅನಿಮೇಶ್ ಸಕ್ಸೇನಾ ಈಟಿವಿ ಭಾರತ್‌ಗೆ ತಿಳಿಸಿದ್ದಾರೆ.