ಅಯೋಧ್ಯೆ (ಉತ್ತರ ಪ್ರದೇಶ): ಅಯೋಧ್ಯೆಯ ರಾಮ ಜನ್ಮಭೂಮಿ ಸಂಕೀರ್ಣ ಪ್ರದೇಶದಲ್ಲಿ ಮೊಬೈಲ್ ಫೋನ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಶ್ರೀ ರಾಮತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯರೊಂದಿಗೆ ಸಮಾಲೋಚಿಸಿ ಜಿಲ್ಲಾಡಳಿತ ಭಾನುವಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಈ ಹಿಂದೆ ರಾಮ್ ಲಲ್ಲಾ ವಿಗ್ರಹವನ್ನು ತಾತ್ಕಾಲಿಕ ದೇವಾಲಯದಿಂದ ಹೊಸ ಮಂದಿರದೆಡೆಗೆ ಸ್ಥಳಾಂತರಿಸುವ ಸಮಯದಲ್ಲಿ, ಪುರೋಹಿತರು ಮತ್ತು ಕಾರ್ಮಿಕರಿಗೆ ತಮ್ಮ ಮೊಬೈಲ್ ಫೋನ್ ಸಾಗಿಸಲು ಅವಕಾಶ ನೀಡಲಾಗಿತ್ತು. ಆದರೆ ಹೊಸ ಮಾರ್ಗಸೂಚಿಗಳ ಪ್ರಕಾರ, ಜಿಲ್ಲೆಯ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಗೆ ಮಾತ್ರ ಇಲ್ಲಿ ಮೊಬೈಲ್ ಫೋನ್‌ಗಳನ್ನು ಇರಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ಭಕ್ತರು ದೇವಾಲಯ ಮತ್ತು ಅಕ್ಕಪಕ್ಕದ ಪ್ರದೇಶದ ಚಿತ್ರಗಳನ್ನು ತೆಗೆಯುತ್ತಿದ್ದಾರೆ. ಇದು ಭದ್ರತೆಗೆ ಅಪಾಯ ತಂದೊಡ್ಡುತ್ತಿದೆ. ಹಾಗಾಗಿ ಭದ್ರತಾ ಕಾಳಜಿಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಚಂಪತ್ ರೈ ಹೇಳಿದರು.
ಈ ಮಧ್ಯೆ, ರಾಮ್ ಲಲ್ಲಾ ದೇವಸ್ಥಾನದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರು ಮೊಬೈಲ್ ಫೋನ್ ನಿಷೇಧಿಸುವ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ರಾಮ ದೇವಾಲಯ ಪ್ರದೇಶವು ಹೆಚ್ಚಿನ ಭದ್ರತಾ ವಲಯವಾಗಿದೆ ಮತ್ತು ಭದ್ರತೆಯನ್ನು ಬಲಪಡಿಸುವ ಯಾವುದೇ ಕ್ರಮವು ಕೂಡಾ ಸ್ವಾಗತಾರ್ಹ. ನನ್ನ ಮೊಬೈಲ್ ಫೋನ್ಅನ್ನು ದೇವಾಲಯದ ಪ್ರದೇಶಕ್ಕೆ ಸಹ ನಾನು ಸಾಗಿಸುವುದಿಲ್ಲ ಎಂದು ಅವರು ಹೇಳಿದರು.