ಚಿತ್ತೂರು: ಆಂಧ್ರ ಪ್ರದೇಶ-ತಮಿಳುನಾಡು ಗಡಿ ಬಳಿಯ ಚಿತ್ತೂರಿನಲ್ಲಿ ದುಷ್ಕರ್ಮಿಗಳು ಮುಂಬೈಗೆ ಹೋಗುತ್ತಿದ್ದ ಲಾರಿಯಿಂದ ಸುಮಾರು 2 ಕೋಟಿ ರೂಪಾಯಿ ಮೌಲ್ಯದ ಮೊಬೈಲ್ ಫೋನ್‌ಗಳ ಬಂಡಲ್ ಕದ್ದಿರುವ ಘಟನೆ ನಡೆದಿದೆ.
ಶಿಯೋಮಿ ಮೊಬೈಲ್ ಉತ್ಪಾದನಾ ಘಟಕದಿಂದ ಮೊಬೈಲ್ ಫೋನ್ಗಳನ್ನು ಸಾಗಿಸುತ್ತಿದ್ದ ಲಾರಿ ಚಾಲಕ ಇರ್ಫಾನ್ ಎಂಬಾತನನ್ನು ಥಳಿಸಿ, ಕಟ್ಟಿಹಾಕಿ ಲಾರಿಯಿಂದ ಹೊರಗೆ ಎಸೆಯಲಾಗಿದೆ. ನಂತರ ದರೋಡೆಕೋರರು ಲಾರಿಯನ್ನು ತಾವಿಚ್ಛಿಸಿದ್ದ ಸ್ಥಳಕ್ಕೆ ಕೊಂಡೊಯ್ದಿದ್ದಾರೆ. ಬಳಿಕ ಅದರಲ್ಲಿದ್ದ ಮೊಬೈಲ್ ಬಂಡಲ್ಗಳನ್ನು ದೋಚಿ ಪರಾರಿಯಾಗಿದ್ದಾರೆ ಎಂದು ನಗಾರಿ ನಗರ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇನ್ನು ಇರ್ಫಾನ್ ಹೇಗೋ ಅಲ್ಲಿಂದ ಪಾರಾಗಿ ನಗರಿ ನಗರವನ್ನು ತಲುಪಿ ನಂತರ ಅಲ್ಲಿನ ಸ್ಥಳೀಯ ಜನರ ಸಹಾಯದಿಂದ ನಗರಿ ನಗರ ಪೊಲೀಸ್ ಠಾಣೆಗೆ ತಲುಪಿ ದೂರು ದಾಖಲಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿ ಹೇಳಿದರು.
ನಂತರ ನಗರಿ ನಗರ ಪೊಲೀಸರು ಇರ್ಫಾನ್‌ನನ್ನು ಕರೆದುಕೊಂಡು ಕಂಟೈನರ್ ಲಾರಿಯನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಬೆಳಿಗ್ಗೆ 11 ಗಂಟೆಗೆ ನಾರಾಯಣವನಂ ಮತ್ತು ಪುಟ್ಟೂರು ನಡುವಿನ ಪ್ರದೇಶದಲ್ಲಿ ಲಾರಿ ಪತ್ತೆಯಾಗಿದೆ.
"ಪೊಲೀಸರು ಮೊಬೈಲ್ ಉತ್ಪಾದನಾ ಕಂಪನಿಯ ಶ್ರೀಪೆರಂಬುದೂರ್ ಘಟಕವನ್ನು ಸಂಪರ್ಕಿಸಿ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ಕಂಪನಿಯ ಪ್ರತಿನಿಧಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ನಂತರ ಪೊಲೀಸರು ಪರಿಶೀಲಿಸಲು ಕಂಟೈನರ್‌ಗೆ ಕರೆದೊಯ್ದರು" ಎಂದು ಅಧಿಕಾರಿ ಹೇಳಿದರು.
ಕಂಪನಿಯ ಪ್ರತಿನಿಧಿಗಳು ಕಂಟೇನರ್ ಪರಿಶೀಲಿಸಿದ್ದಾರೆ. ಒಟ್ಟು ಮೊಬೈಲ್ ಫೋನ್‌ಗಳ 16 ಕಟ್ಟುಗಳ ಪೈಕಿ 8 ಕಟ್ಟುಗಳನ್ನು ಕಂಟೈನರ್‌ನಿಂದ ಕಳವು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಕದ್ದ ಆಸ್ತಿಯ ಮೌಲ್ಯ ಅಂದಾಜು 2 ಕೋಟಿ ರೂಪಾಯಿಯಾಗಿದ್ದು, ಕಂಪನಿಯ ಪ್ರತಿನಿಧಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಐಪಿಸಿಯ ಸೆಕ್ಷನ್ 395ರ ಅಡಿ ಎಫ್ಐಆರ್ ದಾಖಲಿಸಿದ್ದಾರೆ.
"ಚಾಲಕ ಇರ್ಫಾನ್‌ನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಪ್ರಕರಣದ ಬಗ್ಗೆ ತನಿಖೆ ಆರಂಭಿಸಲಾಗಿದೆ. ಅಪರಾಧಿಗಳನ್ನು ಹಿಡಿಯಲು ವಿಶೇಷ ತಂಡಗಳನ್ನು ರಚಿಸಲಾಗಿದೆ" ಎಂದು ಅಧಿಕಾರಿ ತಿಳಿಸಿದ್ದಾರೆ.