ಮಥುರಾ (ಉತ್ತರ ಪ್ರದೇಶ): 17 ವರ್ಷದ ಬಾಲಕನೋರ್ವ ತನ್ನ ತಂದೆಯನ್ನು ಕೊಂದು, ನಂತರ ಮೊಬೈಲ್ಮೂಲಕ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕ್ರೈಮ್ ಪ್ಯಾಟ್ರೋಲ್' ಎಂಬ ಸರಣಿ ಕಾರ್ಯಕ್ರಮವನ್ನು ನೂರಕ್ಕೂ ಹೆಚ್ಚು ಬಾರಿ ವೀಕ್ಷಿಸಿದ್ದಾನೆ. ಅದರಂತೆ ಸಾಕ್ಷ್ಯ ನಾಶಕ್ಕಾಗಿ ಯತ್ನಿಸಿದ ಘಟನೆ ಉತ್ತರ ಪ್ರದೇಶ ಮಥುರಾದಲ್ಲಿ ನಡೆದಿದೆ.
ಮೇ 2ರಂದು ಘಟನೆ ನಡೆದಿದ್ದು, 42 ವರ್ಷದ ಮನೋಜ್ ಮಿಶ್ರಾ ಕೊಲೆಯಾದ ವ್ಯಕ್ತಿಯಾಗಿದ್ದಾನೆ. ತನ್ನನ್ನು ಬೈದಿದ್ದಾನೆ ಎಂದು ಕುಪಿತಗೊಂಡು ಕಬ್ಬಿಣದ ರಾಡ್ನಿಂದ ತಲೆಗೆ ಹೊಡೆದು ಕೊಲೆ ಮಾಡಲಾಗಿತ್ತು. ನಂತರ ಶವವನ್ನು ಬಟ್ಟೆಯಿಂದ ಸುತ್ತಿ, ತಾಯಿಯ ಸಹಾಯದಿಂದ ಸ್ಕೂಟಿಯಲ್ಲಿ ತನ್ನ ಮನೆಯಿಂದ 5 ಕಿಲೋಮೀಟರ್ ದೂರವಿರುವ ಅರಣ್ಯ ಪ್ರದೇಶಕ್ಕೆ ತಂದು ಪೆಟ್ರೋಲ್ ಹಾಗೂ ಟಾಯ್ಲೆಟ್ ಪೇಪರ್ಗಳನ್ನು ಬಳಸಿ ಸುಟ್ಟುಹಾಕಿದ್ದನು.
ಮನೋಜ್ ಮಿಶ್ರಾ ಇಸ್ಕಾನ್ನಲ್ಲಿ ದಾನ ಸಂಗ್ರಹಿಸುವ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ಸಂಸ್ಥೆಯ ಒತ್ತಾಯದ ಮೇರೆಗೆ ಮನೋಜ್ ಮಿಶ್ರಾ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ಮೇ 27ರಂದು ದೂರು ನೀಡಿದ್ದರು.
ಕೆಲವು ದಿನಗಳ ನಂತರ ಸುಟ್ಟ ಶವವೊಂದು ಪತ್ತೆಯಾಗಿದ್ದು, ಕನ್ನಡಕದ ಸಹಾಯದಿಂದ ಮನೋಜ್ ಮಿಶ್ರಾನ ದೇಹ ಎಂದು ಪತ್ತೆ ಹಚ್ಚಲಾಗಿತ್ತು. ಈ ವೇಳೆ ಆತನ ಸಹೋದ್ಯೋಗಿಗಳು ಮನೋಜ್ ಮಿಶ್ರಾ ಆಗಾಗ ಭಗವದ್ಗೀತೆ ಭೋದಿಸಲು ಕೆಲವು ದಿನಗಳು ಹೋಗುತ್ತಿದ್ದ ಕಾರಣದಿಂದ ಅನುಮಾನ ಬರಲಿಲ್ಲ ಎಂದು ಹೇಳಿದ್ದರು.
ಮನೋಜ್ರ ಮಗನನ್ನು ವಿಚಾರಣೆಗೆ ಕರೆದಾಗ ತಪ್ಪಿಸಿಕೊಳ್ಳುತ್ತಿದ್ದು, ಕೆಲವೊಮ್ಮೆ 'ಯಾವ ಕಾನೂನಿನ ಅಡಿಯಲ್ಲಿ ನನ್ನನ್ನು ವಿಚಾರಣೆ ಮಾಡುತ್ತೀರಿ?' ಎಂದು ಪ್ರಶ್ನಿಸುತ್ತಿದ್ದನು ಎಂದು ಮಥುರಾ ಪೊಲೀಸ್ ವರಿಷ್ಠಾಧಿಕಾರಿ ಉದಯ್ ಶಂಕರ್ ಸಿಂಗ್ ಹೇಳಿದ್ದಾರೆ.
ಈ ವೇಳೆ ಅನುಮಾನಗೊಂಡ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ, ತಾನೇ ತನ್ನ ತಂದೆಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಆತನ ಮೊಬೈಲ್ ಅನ್ನು ಪರಿಶೀಲಿಸಿದಾಗ ಕ್ರೈಮ್ ಪ್ಯಾಟ್ರೋಲ್ ಎಂಬ ಅಪರಾಧ ಸರಣಿಯನ್ನು ನೂರಕ್ಕೂ ಹೆಚ್ಚು ಭಾರಿ ವೀಕ್ಷಿಸಿದ್ದಾಗಿ ತಿಳಿದುಬಂದಿದೆ.
ಸದ್ಯಕ್ಕೆ ಪೊಲೀಸರು ಬಾಲಕ ಹಾಗೂ ಆತನ ತಾಯಿ ಸಂಗೀತಾ ಮಿಶ್ರಾ (39) ಅವರನ್ನು ಬಂಧಿಸಿದ್ದು, ಕೊಲೆ ಮತ್ತು ಸಾಕ್ಷ್ಯ ನಾಶ ಆರೋಪದಲ್ಲಿ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.