ಪುಣೆ: ಮಹಾರಾಷ್ಟ್ರದ ಪುಣೆಯ ಮೈ ಲಾಬ್ ಡಿಸ್ಕವರಿ ಕಂಪನಿಯು ಕೊರೊನಾ ಟೆಸ್ಟಿಂಗ್ ಕಿಟ್ಗಳನ್ನು ತಯಾರಿಸಲು ಮತ್ತು ಮಾರಾಟ ಮಾಡಲು ಸಂಪೂರ್ಣ ಅನುಮೋದನೆ ಪಡೆದ ಮೊದಲ ಭಾರತೀಯ ಸಂಸ್ಥೆಯಾಗಿ ಹೊರಮೊಮ್ಮಿದ್ದು, ಇದರ ಕ್ರೆಡಿಟ್ ಓರ್ವ ತುಂಬು ಗರ್ಭಿಣಿಗೆ ಸಲ್ಲುತ್ತದೆ.
ಆಣ್ವಿಕ ರೋಗನಿರ್ಣಯ ಕಂಪನಿಯಾದ ಮೈ ಲಾಬ್ ಡಿಸ್ಕವರಿಯ ವೈರಾಲಜಿಸ್ಟ್ ಡಾ.ಮಿನಾಲ್ ದಾಖ್ವೆ ಭೋಸ್ಲೆ, ಭಾರತದಲ್ಲಿ ಮೊದಲ ಕೋವಿಡ್-19 ಟೆಸ್ಟಿಂಗ್ ಕಿಟ್ ತಯಾರಿಸಿದ ಮಹಿಳೆಯಾಗಿದ್ದಾರೆ. ಈ ಕಿಟ್ನ ಹೆಸರು 'ಪ್ಯಾಥೋ ಡಿಟೆಕ್ಟ್' ಆಗಿದ್ದು, ಇದು ಒಂದೇ ಬಾರಿಗೆ ನೂರು ಮಾದರಿಗಳನ್ನು ಪರೀಕ್ಷಿಸಲಿದ್ದು, ಇದರ ಬೆಲೆ ಕೇವಲ 1,200 ರೂ ಆಗಿದೆ. ಚೀನಾದ ಕಿಟ್ಗೆ ಈವರೆಗೆ 4,500 ರೂ. ನೀಡಬೇಕಿತ್ತು. ಕೇವಲ ಆರು ವಾರಗಳಲ್ಲಿ ಮಿನಾಲ್ ನೇತೃತ್ವದ 10 ಜನರ ಸಂಶೋಧನಾ ತಂಡವು ಕಿಟ್ ಅನ್ನು ಕಂಡುಹಿಡಿದಿದ್ದಾರೆ.
ಇನ್ನೊಂದು ಗಮನಿಸಬೇಕಾದ ವಿಷಯವೆಂದರೆ, ತುಂಬು ಗರ್ಭಿಣಿಯಾಗಿದ್ದ ಮಿನಾಲ್, ಸಂಪೂರ್ಣವಾಗಿ ಕಿಟ್ ಅನ್ನು ಸಿದ್ಧಪಡಿಸಿ, ಅದನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ತಲುಪಿಸಿದ ಒಂದು ದಿನದ ಬಳಿಕ ಮಗುವಿಗೆ ಜನ್ಮ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಿನಾಲ್ ದಾಖ್ವೆ, ಇದೊಂದು ತುರ್ತು ಪರಿಸ್ಥಿತಿಯಾಗಿದ್ದು, ಭಾರತದಲ್ಲಿ ಕೊರೊನಾ ಟೆಸ್ಟಿಂಗ್ ಕಿಟ್ ಅನಿವಾರ್ಯವಿತ್ತು. ನನ್ನ ದೇಶಕ್ಕಾಗಿ ಏನಾದರೂ ಸೇವೆ ಸಲ್ಲಿಸಬೇಕೆಂದು ಇದನ್ನ ಸವಾಲಾಗಿ ಸ್ವೀಕರಿಸಿದೆ. ಬೇರೆ ಟೆಸ್ಟಿಂಗ್ ಕಿಟ್ಗಳು ಕೊರೊನಾ ಪರೀಕ್ಷೆಗೆ 6-7 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಆದರೆ ನಾವು ಸಿದ್ಧಪಡಿಸಿರುವ ಕಿಟ್ ಕೇವಲ ಎರಡುವರೆ ಗಂಟೆಯಲ್ಲಿ ಫಲಿತಾಂಶ ನೀಡುತ್ತದೆ ಎಂದು ತಿಳಿಸಿದ್ದಾರೆ.