ನವದೆಹಲಿ: ಗಲ್ವಾನ್‌ನಲ್ಲಿ ಉಂಟಾದ ಸಂಘರ್ಷದ ನಂತರದಲ್ಲಿ ಟಿಕ್ ಟಾಕ್, ವಿಚಾಟ್ ಸೇರಿದಂತೆ 59 ಚೀನಾ ಮೊಬೈಲ್ ಆ್ಯಪ್‌ಗಳನ್ನು ಭಾರತ ಸರ್ಕಾರ ನಿಷೇಧಿಸಿದ ಎರಡು ವಾರಗಳ ನಂತರದಲ್ಲಿ ಜಿ20 ಡಿಜಿಟಲ್ ಎಕಾನಮಿ ಸಚಿವರ ಸಭೆಯ ವೇಳೆ ಭಾರತದ ಐಟಿ ಮತ್ತು ಚೀನಾದ ಸಚಿವರು ಇಂದು ವರ್ಚುವಲ್ ರೂಮ್‌ನಲ್ಲಿ ಭೇಟಿಯಾಗಿದ್ದರು.
ಕೇಂದ್ರದ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ರವಿಶಂಕರ್ ಪ್ರಸಾದ್, ಚೀನಾದ ಹೆಸರನ್ನು ಪ್ರಸ್ತಾಪಿಸದೇ ದೇಶದ ನಾಗರಿಕರ ಡೇಟಾ ಗೌಪ್ಯತೆ ಮತ್ತು ಭದ್ರತೆಯನ್ನು ಡಿಜಿಟಲ್ ಪ್ಲಾಟ್‌ಫಾರಂಗಳು ಗೌರವಿಸಬೇಕು ಎಂದಿದ್ದಾರೆ. ಭದ್ರತೆ ವಿಚಾರದಲ್ಲಿ, ಹಲವು ದೇಶಗಳಲ್ಲಿ ಅಸ್ತಿತ್ವದಲ್ಲಿರುವ ಡಿಜಿಟಲ್ ಪ್ಲಾಟ್‌ಫಾರಂಗಳು ವಿಶ್ವಾಸಾರ್ಹ, ಸುರಕ್ಷಿತ ಮತ್ತು ಸುಭದ್ರವಾಗಿರಬೇಕು ಎಂದಿದ್ದಾರೆ. ಸುರಕ್ಷತೆ, ರಕ್ಷಣೆ ಮತ್ತು ಡೇಟಾ ಗೌಪ್ಯತೆಗೆ ಸಂಬಂಧಿಸಿದಂತೆ ಸಾರ್ವಭೌಮ ದೇಶಗಳಿಗೆ ಪ್ರತಿಕ್ರಿಯಾತ್ಮಕ, ಹೊಣೆಗಾರ ಮತ್ತು ಸಂವೇದನಾಶೀಲವಾಗಿ ಡಿಜಿಟಲ್ ಪ್ಲಾಟ್‌ಫಾರಂಗಳು ಇರಬೇಕು ಎಂದು ಜಿ-20 ಯ ಅಧ್ಯಕ್ಷತೆ ಹೊಂದಿರುವ ಸೌದಿ ಅರೇಬಿಯಾ ನಡೆಸಿದ ಸಭೆಯಲ್ಲಿ ಹೇಳಿದ್ದಾರೆ.
ಚೀನಾ ಆ್ಯಪ್‌ಗಳನ್ನು ನಿಷೇಧಿಸಿದ ಭಾರತದ ನಿರ್ಧಾರಕ್ಕೆ ಚೀನಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಕ್ರಮವು ಡಬ್ಲ್ಯೂಎಚ್‌ಒ ಮಾರ್ಗಸೂಚಿಗಳ ಉಲ್ಲಂಘನೆ ಎಂದು ದ್ವಿಪಕ್ಷೀಯ ಮಾತುಕತೆಯಲ್ಲಿ ಆಕ್ಷೇಪಿಸಿದೆ.
ಈ ಮಧ್ಯೆ, ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಚೀನಾ ಆ್ಯಪ್ ಕಂಪನಿಗಳು ಕಟ್ಟುನಿಟ್ಟಾಗಿ ಬದ್ಧವಾಗಿರಬೇಕು. ಒಂದು ವೇಳೆ ಉಲ್ಲಂಘಿಸಿದರೆ, ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಇಂದು ನಡೆದ ಜಿ20 ಸಭೆಯಲ್ಲಿ “ಡೇಟಾ ಆರ್ಥಿಕತೆಯ ಜೊತೆಗೆ ಡಿಜಿಟಲ್ ಆರ್ಥಿಕತೆಯೂ ಒಟ್ಟಿಗೆ ಸಾಗಬೇಕು ಎಂದು ನಾವೆಲ್ಲರೂ ಒಪ್ಪುತ್ತೇವೆ. ಡೇಟಾದ ಮೇಲೆ ಸಾರ್ವಭೌಮತ್ವವನ್ನು ನಾವು ಹೊಂದಿರಬೇಕು. ಸಾರ್ವಭೌಮ ದೇಶದ ಜನರ ಡೇಟಾವನ್ನು ರಕ್ಷಿಸುವುದು ಜನರ ಗೌಪ್ಯತೆಯ ರಕ್ಷಣೆಯೂ ಆಗಿರುತ್ತದೆ ಎಂದಿದ್ದಾರೆ. “ಭಾರತವು ಕಟ್ಟುನಿಟ್ಟಾದ ವೈಯಕ್ತಿಕ ಡೇಟಾ ರಕ್ಷಣೆ ಕಾನೂನನ್ನು ಜಾರಿಗೊಳಿಸಲಿದೆ. ಇದು ನಾಗರಿಕರ ಡೇಟಾ ಗೌಪ್ಯತೆ ಸಂಬಂಧಿ ಅತಂಕಗಳನ್ನು ಪರಿಹರಿಸಲಿದೆ. ಆದರೆ ಆವಿಷ್ಕಾರ ಮತ್ತು ಆರ್ಥಿಕ ಅಭಿವೃದ್ಧಿಗೆ ಡೇಟಾ ಲಭ್ಯತೆಯೂ ಇರಲಿದೆ” ಎಂದು ಜಿ20ಯಲ್ಲಿ ಭಾಗವಹಿಸಿದ ದೇಶಗಳಿಗೆ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ. ಕೋವಿಡ್-19 ವಿರುದ್ಧ ಹೋರಾಟದಲ್ಲಿ ಭಾರತದ ಡಿಜಿಟಲ್ ಆವಿಷ್ಕಾರಗಳ ಪೈಕಿ ಆರೋಗ್ಯ ಸೇತು ಆ್ಯಪ್ ಬಗ್ಗೆ ಅವರು ಪ್ರಸ್ತಾಪಿಸಿದ್ದಾರೆ.
ಈ ಮಧ್ಯೆ ಯುಎಸ್‌ಐಬಿಸಿ (ಯುಎಸ್ ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್) ಆಯೋಜಿಸಿದ ಭಾರತದ ಐಡಿಯಾಗಳ ಸಮ್ಮೇಳನವನ್ನು ಉದ್ದೇಶಿಸಿ ಅಮೆರಿಕದ ವಿದೇಶಾಂಗ ಸಚಿವ ಮೈಕ್ ಪಾಂಪಿಯೊ ಮಾತನಾಡಿದ್ದಾರೆ. ಗಲ್ವಾನ್ ಸಂಘರ್ಷದಲ್ಲಿ ಚೀನಾದಿಂದಾಗಿ ಭಾರತದ 20 ಯೋಧರು ಹುತಾತ್ಮರಾದ ಸನ್ನಿವೇಶವನ್ನು ಒಪ್ಪಲಾಗದು ಎಂದಿದ್ದಾರೆ. ಅಲ್ಲದೇ, ಮೊಬೈಲ್ ಆ್ಯಪ್‌ಗಳನ್ನು ನಿಷೇಧಿಸಿದ ಭಾರತದ ನಿರ್ಧಾರವನ್ನು ಅವರು ಸ್ವಾಗತಿಸಿದ್ದಾರೆ. “ನಮ್ಮ ಪ್ರಜಾಪ್ರಭುತ್ವವು ಒಟ್ಟಾಗಿ ಕೆಲಸ ಮಾಡುತ್ತದೆ. ಅದರಲ್ಲೂ ವಿಶೇಷವಾಗಿ ಚೀನಾದ ಕಮ್ಯೂನಿಸ್ಟ್ ಪಾರ್ಟಿ (ಸಿಸಿಪಿ) ನಮಗೆ ಹುಟ್ಟುಹಾಕುವ ಸವಾಲಿನ ವಿಚಾರದಲ್ಲಿ ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಪಾಂಪಿಯೊ ಹೇಳಿದ್ದಾರೆ.
ಪಿಎಲ್‌ಎ ಇತ್ತೀಚೆಗೆ ಹುಟ್ಟುಹಾಕಿದ ಸಂಘರ್ಷವು ಚೀನಾ ಕಮ್ಯೂನಿಸ್ಟ್ ಪಾರ್ಟಿಯ ಅಸಮ್ಮತ ವರ್ತನೆಯ ಇತ್ತೀಚಿನ ಉದಾಹರಣೆಯಾಗಿದೆ. ಭಾರತದ 20 ಯೋಧರು ಹುತಾತ್ಮರಾಗಿದ್ದು ನಮಗೆ ಅಪಾರ ದುಃಖ ತಂದಿದೆ. ನಮ್ಮ ಸಮಗ್ರ ಪ್ರಯತ್ನದಿಂದ ನಾವು ನಮ್ಮ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳಬಹುದು ಎಂಬ ವಿಶ್ವಾಸ ನನಗಿದೆ. ಭಾರತೀಯರಿಗೆ ಗಂಭೀರ ಭದ್ರತಾ ಅಪಾಯವನ್ನು ಉಂಟು ಮಾಡುವ ಟಿಕ್ ಟಾಕ್ ಸೇರಿದಂತೆ 59 ಚೀನಾ ಮೊಬೈಲ್ ಆ್ಯಪ್‌ಗಳನ್ನು ನಿಷೇಧಿಸಿದ ಭಾರತದ ನಿರ್ಧಾರವನ್ನು ನಾನು ವಿಶೇಷವಾಗಿ ಮೆಚ್ಚುತ್ತೇನೆ ಎಂದು ಪಾಂಪಿಯೊ ಹೇಳಿದ್ದಾರೆ.
ಭಾರತದ ಐಡಿಯಾಗಳ ಸಮ್ಮೇಳನದ ವೇಳೆ ಇನ್ನೊಂದು ಚರ್ಚೆಯಲ್ಲಿ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಜೊತೆಗೆ ವೇದಿಕೆ ಹಂಚಿಕೊಂಡ ಯುಎಸ್-ಇಂಡಿಯಾ ಕಾಕಸ್‌ನ ಸಹ ಅಧ್ಯಕ್ಷ ಮಾರ್ಕ್ ವಾರ್ಕ್ ವಾರ್ನರ್, ಚೀನಾದ ಬೆಳೆಯುತ್ತಿರುವ ಪ್ರಾಧಾನ್ಯತೆಯನ್ನು ಎದುರಿಸಲು ತಂತ್ರಜ್ಞಾನ ಅನ್ವೇಷಣೆಯಲ್ಲಿ ಭಾರತದಂತಹ ದೇಶಗಳ ಸಹಭಾಗಿತ್ವ ಅಗತ್ಯವಿದೆ ಎಂದಿದ್ದಾರೆ. “ಚೀನಾದಿಂದ ಹೊರಕ್ಕೆ ಜಾಗತಿಕ ಪೂರೈಕೆ ಸರಣಿಯನ್ನು ಕೊಂಡೊಯ್ಯುವ ಮತ್ತು ಟೆಲಿಕಾಂ, ವೈದ್ಯಕೀಯ ಪೂರೈಕೆಗಳು ಹಾಗೂ ಇತರ ವಲಯದಲ್ಲಿ ಚೀನಾದ ಕಂಪನಿಗಳ ಮೇಲೆ ಅವಲಂಬನೆಯನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಭಾರತ ಹೊಂದಿದೆ. ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ವಿಶ್ವದ ಹಲವು ದೇಶಗಳ ವಿಶ್ವಾಸವನ್ನು ಹೊಂದಿರುವುದರಿಂದ ಭಾರತಕ್ಕೆ ಸಾಮರ್ಥ್ಯ ಲಭ್ಯವಾಗಿದೆ” ಎಂದು ಪಾಂಪಿಯೊ ಹೇಳಿದ್ದಾರೆ.