ತಿರುಪ್ಪೂರು (ತಮಿಳುನಾಡು): ಕೊರೊನಾ ವೈರಸ್ ಪ್ರೇರಿತ ಲಾಕ್‌ಡೌನ್ ತಂದೊಡ್ಡಿರುವ ಸಂಕಷ್ಟದಿಂದಾಗಿ ಅನೇಕ ವಲಸೆ ಕಾರ್ಮಿಕರು ಮಾಡಲು ಕೆಲಸವಿಲ್ಲದೆ ಪ್ರತಿನಿತ್ಯ ಹಸಿವಿನಿಂದ ಬಳಲುತ್ತಿದ್ದಾರೆ. ಹಸಿವು ನೀಗಿಸಲು ಸಾಧ್ಯವಾಗದ ಇವರು, ತಮ್ಮ ಜೀವವೊಂದಿದ್ದರೆ ಸಾಕು ಎಂದು ತಮ್ಮ ತಾಯ್ನಾಡಿಗೆ ಹಿಂತಿರುಗುತ್ತಿದ್ದಾರೆ.
ತಮಿಳುನಾಡಿನ ತಿರುಪ್ಪೂರಲ್ಲಿರುವ ಜಿಲ್ಲಾ ಪಂಚಾಯತ್ ಕಚೇರಿ ಎದುರು 200ಕ್ಕೂ ಹೆಚ್ಚು ವಲಸೆ ಕಾರ್ಮಿಕರು ಧರಣಿ ಕೂತಿದ್ದು, ತಮ್ಮನ್ನು ತಾಯ್ನಾಡಿಗೆ ತಲುಪಿಸಲು ರೈಲು ಟಿಕೆಟ್ ನೀಡುವಂತೆ ಪ್ರತಿಭಟನೆ ನಡೆಸಿದ್ದಾರೆ.
ವಲಸೆ ಕಾರ್ಮಿಕರು ತಮ್ಮ ಊರಿಗೆ ಮರಳಲು ನೆರವು ನೀಡುವಂತೆ ಕೇಂದ್ರ ಸರ್ಕಾರ ಆಯಾ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದ್ದರಿಂದ ಈ ಎಲ್ಲಾ ವಲಸೆ ಕಾರ್ಮಿಕರು ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸಿದ್ದರು. ಆದರೆ ಜಿಲ್ಲಾಡಳಿತ ಈ ಕಾರ್ಮಿಕರಿಗೆ ರೈಲ್ವೆ ಟಿಕೆಟ್ ನೀಡದ ಹಿನ್ನೆಲೆ ಆಕ್ರೋಶಗೊಂಡು ಇಂದು ಧರಣಿ ನಡೆಸುತ್ತಿದ್ದಾರೆ.
ಕೆಲ ಸಮಯದ ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು, ರೈಲು ಟಿಕೆಟ್‌ಗಾಗಿ ಟೋಕನ್‌ಗಳನ್ನು ನೀಡಿ ನಂತರ ಉಳಿದ ಪ್ರಕ್ರಿಯೆಗಳನ್ನು ನಡೆಸಿ ತವರಿಗೆ ಕಳುಹಿಸುವುದಾಗಿ ಭರವಸೆ ನೀಡಿದರು.