ಮುಜಾಫರ್ನಗರ: ರಸ್ತೆ ಮೂಲಕ ಮನೆಗೆ ತೆರಳುತ್ತಿದ್ದ ವಲಸೆ ಕಾರ್ಮಿಕರ ಮೇಲೆ ಸರ್ಕಾರಿ ಬಸ್ ಹರಿದ ಪರಿಣಾಮ ಆರು ಮಂದಿ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರಪ್ರದೇಶದ ಮುಜಾಫರ್ನಗರದಲ್ಲಿ ನಡೆದಿದೆ.
ಬಿಹಾರದಿಂದ ಪಂಜಾಬ್ಗೆ ಕಾಲ್ನಡಿಗೆಯಲ್ಲಿ ಇವರು ತೆರಳುತ್ತಿದ್ದವರು. ಈ ವೇಳೆ ಮುಜಾಫರ್ನಗರ-ಸಹರಾನ್ಪುರ್ ಹೈವೇಯಲ್ಲಿ ವೇಗವಾಗಿ ಬಂದಿರುವ ಬಸ್ ಇವರ ಮೇಲೆ ಹರಿದಿದೆ. ಘಟನಾ ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ನಿನ್ನೆ ರಾತ್ರಿ 11 ಗಂಟೆಗೆ ಈ ದುರ್ಘಟನೆ ನಡೆದಿದ್ದು, ಈ ವೇಳೆ ಬಸ್ನಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ ಎಂದು ತಿಳಿದು ಬಂದಿದೆ. ದೇಶದಲ್ಲಿ ಲಾಕ್ಡೌನ್ ಹೇರಿಕೆ ಮಾಡಿದಾಗಿನಿಂದಲೂ ರಸ್ತೆ, ರೈಲ್ವೆ ಹಳಿ ಮೂಲಕ ಸಾವಿರಾರು ಕಾರ್ಮಿಕರು ಮನೆಗೆ ತೆರಳುತ್ತಿದ್ದು, ಈ ವೇಳೆ ಅವಘಡ ಸಂಭವಿಸುತ್ತಿವೆ.
ಕಳೆದ ಕೆಲ ದಿನಗಳ ಹಿಂದೆ ಮಹಾರಾಷ್ಟ್ರದಿಂದ ಉತ್ತರಪ್ರದೇಶಕ್ಕೆ ತೆರಳುತ್ತಿದ್ದ ವಲಸೆ ಕಾರ್ಮಿಕರ ಮೇಲೆ ಗೂಡ್ಸ್ ರೈಲು ಹರಿದು 16 ಮಂದಿ ಸಾವನ್ನಪ್ಪಿದ್ದರು. ಇದಾದ ಬಳಿಕ ಟ್ರಕ್ ಹರಿದು ಐವರು ಸಾವನ್ನಪ್ಪಿದ್ದರು. ಪ್ರತಿದಿನ ಒಂದಲ್ಲ ಒಂದು ರೀತಿಯ ದುರ್ಘಟನೆ ನಡೆಯುತ್ತಿರುವುದು ವರದಿಯಾಗುತ್ತಿವೆ.