ನವದೆಹಲಿ: ವಿವಿಧ ರಾಜ್ಯಗಳಲ್ಲಿ ಉಳಿದುಕೊಂಡಿರುವ ವಲಸೆ ಕಾರ್ಮಿಕರು, ಪ್ರವಾಸಿಗರು ಹಾಗೂ ವಿದ್ಯಾರ್ಥಿಗಳನ್ನು ಅವರ ತವರು ರಾಜ್ಯಗಳಿಗೆ ತಲುಪಿಸುವಂತೆ ಈಗಾಗಲೇ ಕೇಂದ್ರ ಗೃಹ ಸಚಿವಾಲಯ ಎಲ್ಲ ರಾಜ್ಯಗಳಿಗೂ ಸೂಚನೆ ನೀಡಿದ್ದು, ಅದರಂತೆ ವಲಸೆ ಕಾರ್ಮಿಕರನ್ನು ಹೊತ್ತು ವಿಶೇಷ ರೈಲು ಇಂದು ಬೆಳಗ್ಗೆ ಪ್ರಯಾಣ ಬೆಳೆಸಿದೆ.
ತೆಲಂಗಾಣದ ಲಿಗಂಪಲ್ಲಿ ರೈಲ್ವೆ ಸ್ಟೇಷನ್ನಿಂದ ಈ ವಿಶೇಷ ರೈಲು ಕೂಲಿ ಕಾರ್ಮಿಕರನ್ನು ಹೊತ್ತು ಜಾರ್ಖಂಡ್ಗೆ ಪ್ರಯಾಣ ಬೆಳೆಸಿದ್ದಾಗಿ ತೆಲಂಗಾಣ ಸರ್ಕಾರ ಮಾಹಿತಿ ನೀಡಿದೆ. ರೈಲ್ವೆ ಇಲಾಖೆ ನೀಡಿರುವ ಮಾರ್ಗಸೂಚಿ ಪ್ರಕಾರ ಎಲ್ಲ ಪ್ಯಾಸೆಂಜರ್ಗಳಿಗೆ ಸ್ಕ್ರೀನಿಂಗ್ ನಡೆಸಿ, ಸಾಮಾಜಿಕ ಅಂತರದೊಂದಿಗೆ ರೈಲಿನಲ್ಲಿರಿಸಿಕೊಂಡು ಪ್ರಯಾಣ ಆರಂಭಿಸಿದೆ. ವಿಶೇಷ ರೈಲಿನಲ್ಲಿ 1,200 ವಲಸೆ ಕಾರ್ಮಿಕರು ಇದ್ದು, 24 ಬೋಗಿಗಳಿವೆ. ಬೆಳಗ್ಗೆ 4:50ಕ್ಕೆ ಈ ರೈಲು ಪ್ರಯಾಣ ಬೆಳೆಸಿದೆ ಎಂದು ತಿಳಿದು ಬಂದಿದೆ.
ದೇಶದಲ್ಲಿ ಲಾಕ್ಡೌನ್ ಆದೇಶ ಹೊರಬಿದ್ದ ಬಳಿಕ ಇದೇ ಮೊದಲ ರೈಲು ಪ್ರಯಾಣ ಬೆಳೆಸಿದ್ದು, ಅನೇಕ ವಲಸೆ ಕಾರ್ಮಿಕರು ಇದರಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡುತ್ತಿದ್ದಂತೆ ಪಂಜಾಬ್, ಬಿಹಾರ, ರಾಜಸ್ಥಾನ, ಮಹಾರಾಷ್ಟ್ರ, ಕರ್ನಾಟಕ, ನವದೆಹಲಿ ಸೇರಿದಂತೆ ಅನೇಕ ರಾಜ್ಯಗಳು ವಲಸೆ ಕಾರ್ಮಿಕರನ್ನ ವಿವಿಧ ರಾಜ್ಯಗಳಿಗೆ ಬಿಟ್ಟು ಬರುವ ನಿರ್ಧಾರ ಕೈಗೊಂಡಿದ್ದು, ಅದಕ್ಕಾಗಿ ನೊಡಲ್ ಅಧಿಕಾರಗಳ ನೇಮಕ ಮಾಡಿದೆ.
ದೇಶದಲ್ಲಿ ಮಾರ್ಚ್ 25ರಿಂದ ಲಾಕ್ಡೌನ್ ಹೇರಲಾಗಿದ್ದು, ಅಂದಿನಿಂದಲೂ ವಿವಿಧ ರಾಜ್ಯಗಳಲ್ಲಿ ವಲಸೆ ಕಾರ್ಮಿಕರು ಸಿಲುಕಿಕೊಂಡಿದ್ದು, ತೊಂದರೆ ಅನುಭವಿಸುವಂತಾಗಿದೆ. ಇದರ ಮಧ್ಯೆ ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿಸಿದ್ದು, ಅದರ ಪಾಲನೆ ಮಾಡಲು ಎಲ್ಲ ರಾಜ್ಯ ಮುಂದಾಗಿವೆ.