ಗಯಾ (ಬಿಹಾರ): ಸಂಚಾರಕ್ಕೆ ವ್ಯವಸ್ಥೆ ಇಲ್ಲದೆ ತನ್ನ ಗರ್ಭಿಣಿ ಹೆಂಡತಿಯನ್ನು ಕಳೆದುಕೊಂಡ ಈ ನೋವು ಯಾರಿಗೂ ಆಗಬಾರದು ಎಂದು ಹೇಳಿ ಬೆಟ್ಟದ ಮೂಲಕ ಉಳಿ ಮತ್ತು ಸುತ್ತಿಗೆಯನ್ನು ಬಳಸಿ ರಸ್ತೆ ನಿರ್ಮಾಣ ಮಾಡಿದ ದಶರಥ್ ಮಾಂಜಿಯ ಸಾಧನೆಯ ಹಾಗೆಯೇ ಬಿಹಾರದ ವೃದ್ಧರೋರ್ವರು ದೊಡ್ಡ ಸಾಧನೆಯನ್ನೇ ಮಾಡಿದ್ದಾರೆ.
ಬಿಹಾರದ ಇಮಾಮ್‌ಗಂಜ್ ನ ವ್ಯಕ್ತಿಯು ಐದು ಕಿಲೋಮೀಟರ್ ಉದ್ದದ ಕಾಲುವೆಯನ್ನು ತೋಡಿ ಇಡೀ ಹಳ್ಳಿಗೆ ನೀರನ್ನು ನೀಡಿದ್ದಾರೆ. ಗಯಾ, ಇಮಾಮ್‌ಗಂಜ್ ಮತ್ತು ಬ್ಯಾಂಕೆ ಬಜಾರ್ ಬ್ಲಾಕ್‌ನ ಗಡಿಯಲ್ಲಿರುವ ಕೋತಿಲ್ವಾ ಗ್ರಾಮದವರಾದ ಲೌಂಗಿ ಭುಯಾನ್ ಎಂಬುವರು ಈ ಸಾಧನೆ ಮಾಡಿದ್ದಾರೆ. ಇವರು 1998 ರಲ್ಲಿಯೇ ಈ ಕಾಲುವೆ ತೋಡಲು ಆರಂಭಿಸಿದ್ದರು.
ರೈತರು ನೀರಿನ ಅಲಭ್ಯತೆಯಿಂದಾಗಿ ರಬಿ ಬೆಳೆಗಳನ್ನು ಮಾತ್ರ ಬೆಳೆಯುತ್ತಿದ್ದರು. ಹಾಗೆಯೇ ಯುವಜನರು ವಲಸೆ ಹೋಗುತ್ತಿದ್ದರು ಇದನ್ನು ಮನಗಂಡ ಲೌಂಗಿ ಊರಿನ ಉಪಕಾರಕ್ಕಾಗಿ ತಮ್ಮ ಜೀವ, ಜೀವನವನ್ನೇ ಸವೆಸಿದ್ದಾರೆ.

ನಾನು ನನ್ನ ಮೇಕೆಗಳಿಗೆ ಹುಲ್ಲು ಸಂಗ್ರಹಿಸುವ ಸಲುವಾಗಿ ಅರಣ್ಯ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದೆ. ಗ್ರಾಮಸ್ಥರು ನೀರಿನ ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆಂದು ನನಗೆ ಆಗ ತಿಳಿದಿತ್ತು. ಅಲ್ಲದೆ, ಬಡತನದ ಬೇಗೆಕೂಡ ಗ್ರಾಮದಲ್ಲಿ ಹೆಚ್ಚಾಗಿತ್ತು. ಈ ಕಾರಣಕ್ಕಾಗಿಯೇ ನಾನು ಯಾರ ಸಹಾಯವನ್ನು ಪಡೆಯದೇ ಕಾಲುವೆ ಅಗೆಯಲು ನಿರ್ಧಾರ ಮಾಡಿದೆ ಎನ್ನುತ್ತಾರೆ 60 ವರ್ಷದ ಲೌಂಗಿ ಭೂಯಾನ್.
ಭೂಯಾನ್, ಕಾಲುವೆ ತೋಡಲು ಮುಂದಾದಾಗ ಗ್ರಾಮಸ್ಥರು ಅವರನ್ನು ಹುಚ್ಚರೆಂದು ಪರಿಗಣಿಸಿದ್ದರಂತೆ. ಅಲ್ಲದೆ ಅಸಾಧ್ಯವಾದ ಕೆಲಸ ಎಂದು ಹೇಳಿ ಕೈ ಬಿಡಲು ಗ್ರಾಮಸ್ಥರು ಸೂಚಿಸಿದ್ದರಂತೆ. ಈ ಬಗ್ಗೆ ಭೂಯಾನ್ ಅವರೇ ತಮ್ಮ ನೋವುಗಳನ್ನು ಹಂಚಿಕೊಂಡಿದ್ದಾರೆ. ನನ್ನ ಹಳ್ಳಿಯ ಜನರ ಮಾತಿಗೆ ನಾನು ತಲೆಕೆಡಿಸಿಕೊಳ್ಳದೆ ನನ್ನ ಕೆಲಸವನ್ನು ಮುಂದುವರೆಸಿದೆ. ಯಾರಿಗೂ ಆಗ ನಾನು ಉತ್ತರ ನೀಡಲಿಲ್ಲ. ಅಂತಿಮವಾಗಿ ಈಗ ನನ್ನ ಕೆಲಸವನ್ನು ಪೂರ್ಣಗೊಳಿಸಿದ್ದೇನೆ ಎನ್ನುತ್ತಾರೆ.

ಈಗ 3,000 ಕ್ಕೂ ಹೆಚ್ಚು ರೈತರು ವಾಸಿಸುವ ಕೋತಿಲ್ವಾ ಗ್ರಾಮ ಈ ಕಾಲುವೆಯಿಂದ ನೀರನ್ನು ಪಡೆಯುತ್ತಿದೆ. ಈ ಮನುಷ್ಯನ ಅಸಾಧಾರಣ ಸಾಧನೆಗೆ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ. ಈ ಮೊದಲು ನಾವು ನೀರಿನ ಕೊರತೆಯಿಂದಾಗಿ ರಬಿ ಬೆಳೆಗಳನ್ನು ಮಾತ್ರ ಬೆಳೆಯುತ್ತಿದೆವು. ಈಗ, ನಮ್ಮ ಹಳ್ಳಿಗೆ ನೀರು ತಲುಪುತ್ತಿದ್ದಂತೆ ನಾವು ಖರೀಫ್ ಬೆಳೆಯನ್ನು ಸಹ ಬೆಳೆಯಬಹುದು ಎಂದು ಗ್ರಾಮಸ್ಥರೊಬ್ಬರು ಹೇಳುತ್ತಾರೆ. ಇನ್ನು ಭೂಯಾನ್ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಹಿನ್ನೆಲೆ ಸರ್ಕಾರ ಅವರಿಗೆ ಸಹಕಾರ ನೀಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಎಷ್ಟೇ ಹಣಕಾಸಿನ ತೊಂದರೆ ಇದ್ದರೂ ಕೂಡ ತನ್ನ ಮೂವರು ಮಕ್ಕಳು ಮತ್ತು ಹೆಂಡತಿಯೊಂದಿಗೆ ತಾತ್ಕಾಲಿಕ ಮನೆಯಲ್ಲಿ ವಾಸಿಸುವ ಭೂಯಾನ್, ಸರ್ಕಾರದಿಂದ ಯಾವುದೇ ಮನೆ ಅಥವಾ ಪ್ರಶಸ್ತಿಯನ್ನು ಈವರೆಗೂ ಬಯಸಿಲ್ಲ. ಬದಲಾಗಿ, ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿದ್ದು, ಕೊರೊನಾ ವೈರಸ್ ಸಾಂಕ್ರಾಮಿಕ ರೋಗವು ರಾಜ್ಯವನ್ನು ತೀವ್ರವಾಗಿ ಬಾಧಿಸಿರುವ ಕಾರಣ ರಸ್ತೆ ಮತ್ತು ಆಸ್ಪತ್ರೆಗಳ ನಿರ್ಮಾಣದಂತಹ ಅಭಿವೃದ್ಧಿ ಯೋಜನೆಗಳತ್ತ ಸರ್ಕಾರ ಗಮನ ಹರಿಸಬೇಕು ಎಂದು ಅವರು ಹೇಳಿದ್ದಾರೆ.