ಉಜ್ಜೈನಿ (ಮಧ್ಯ ಪ್ರದೇಶ): ಕಾನ್ಪುರ ಎನ್ಕೌಂಟರ್ ಪ್ರಕರಣದ ಪ್ರಮುಖ ಆರೋಪಿ ರೌಡಿಶೀಟರ್ ವಿಕಾಸ್ ದುಬೆಯನ್ನು ಏಳು ದಿನಗಳ ಬಳಿಕ ಮಧ್ಯ ಪ್ರದೇಶದ ಉಜ್ಜೈನಿಯಲ್ಲಿ ಅರೆಸ್ಟ್ ಮಾಡಲಾಗಿದೆ. ಉಜ್ಜೈನಿಯ ಮಹಾಕಾಲ ದೇವಸ್ಥಾನಕ್ಕೆ ಇಂದು ಬೆಳಗ್ಗೆ 7 ಗಂಟೆಗೆ ಬಂದ ವಿಕಾಸ್ ದುಬೆಯನ್ನು ಮೊದಲು ನೋಡಿದ್ದು ದೇವಾಲಯದ ಸೆಕ್ಯುರಿಟಿ ಗಾರ್ಡ್.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸೆಕ್ಯುರಿಟಿ ಗಾರ್ಡ್ ಲಖನ್ ಯಾದವ್, ನಾನು ವಿಕಾಸ್ ದುಬೆ ಅವರ ಫೋಟೋವನ್ನು ನೋಡಿದ್ದೆ. ಮೊದಲು ಯಾರೋ ಒಬ್ಬ ಭಕ್ತ ದರ್ಶನಕ್ಕಾಗಿ ದೇವಸ್ಥಾನಕ್ಕೆ ಬಂದಿದ್ದಾನೆ ಎಂದು ಭಾವಿಸಿದ್ದೆವು. ಆದರೆ, ಆತ ಹಿಂದಿನ ಗೇಟ್ ಮೂಲಕ ದೇವಾಲಯ ಪ್ರವೇಶಿಸಲು ಯತ್ನಿಸಿದ್ದನ್ನು ಕಂಡು ಅನುಮಾನ ಬಂತು. ಬಳಿಕ ಸಿಸಿಟಿವಿ ತುಣುಕಿನಲ್ಲಿ ಈತ ವಿಕಾಸ್ ದುಬೆ ಎಂಬುದನ್ನು ಗುರುತಿಸಿದೆವು. ಎರಡು ಗಂಟೆಗಳ ಕಾಲ ವಿಚಾರಿಸಿ, ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದೆವು" ಎಂದು ಹೇಳಿದ್ದಾರೆ.
ರೌಡಿಶೀಟರ್ ಜೊತೆ ಕೆಲ ಮಂದಿ ಇದ್ದರು. ದುಬೆ ಈಗ ಪೊಲೀಸ್ ಕಸ್ಟಡಿಯಲ್ಲಿದ್ದಾರೆ ಎಂದು ಸೆಕ್ಯುರಿಟಿ ಗಾರ್ಡ್ ಹೇಳಿದ್ದಾರೆ. ಜುಲೈ 3 ರಂದು ಉತ್ತರ ಪ್ರದೇಶದ ಕಾನ್ಪುರದ ಬಿಕ್ರು ಗ್ರಾಮದಲ್ಲಿ ವಿಕಾಸ ದುಬೆ ಬಂಧನಕ್ಕೆ ತೆರಳಿದ್ದ ವೇಳೆ, ಆತ ಹಾಗೂ ಆತನ ಸಹಚರರು ಪೊಲೀಸರ ಮೇಲೆಯೇ ದಾಳಿ ನಡೆಸಿ 8 ಸಿಬ್ಬಂದಿಯನ್ನು ಹತ್ಯೆ ಮಾಡಿದ್ದರು. ಘಟನೆ ನಡೆದ 7 ದಿನಗಳ ಬಳಿಕ ದುಬೆ ಸೆರೆ ಸಿಕ್ಕಿದ್ದಾನೆ.
ದುಬೆಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದರು. ಈತ ಇರುವ ಸ್ಥಳದ ಬಗ್ಗೆ ಮಾಹಿತಿ ನೀಡುವ ವ್ಯಕ್ತಿಗೆ ಮೊದಲು 50 ಸಾವಿರ, ಬಳಿಕ 1.5 ಲಕ್ಷ, 2.5 ಲಕ್ಷ ನೀಡುವುದಾಗಿ ಉತ್ತರ ಪ್ರದೇಶ ಐಜಿ ಮೋಹಿತ್ ಅಗರವಾಲ್ ಘೋಷಿಸಿದ್ದರು. ನಿನ್ನೆ ಮತ್ತೆ ಈ ಹಣವನ್ನು 5 ಲಕ್ಷಕ್ಕೆ ಏರಿಕೆ ಮಾಡಿದ್ದರು.