ಮೀರತ್ (ಉತ್ತರ ಪ್ರದೇಶ): ತನ್ನ ಪ್ರೀತಿಗೆ ಅಡ್ಡ ಬಂದ ಪತಿಗೆ ಪತ್ನಿಯೇ ಆ್ಯಸಿಡ್ ಹಾಕಿ ಕೊಲ್ಲಲು ಪ್ರಯತ್ನಿಸಿದ್ದಾಳೆ. ಅಲ್ಲದೆ ವಿಷಯ ಹೊರಗೆ ಬಾಯಿ ಬಿಟ್ಟರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿರುವ ವಿಚಿತ್ರ ಘಟನೆ ಪಶ್ಚಿಮ ಉತ್ತರ ಪ್ರದೇಶದ ಮೀರತ್‌ನ ಲಿಸಾಡಿಯ ಲಖಿಮ್ ಪುರದಲ್ಲಿ ನಡೆದಿದೆ.
ಪ್ರೇಮಿಯ ಆಜ್ಞೆಯ ಮೇರೆಗೆ ಪತ್ನಿ ನೀರಿನಲ್ಲಿ ಆ್ಯಸಿಡ್ ಬೆರೆಸಿ ಗಂಡನಿಗೆ ಕುಡಿಸಿದ್ದಾಳೆ. ಆ ಬಳಿಕ ಆತನ ಆರೋಗ್ಯ ಹದಗೆಟ್ಟಿತ್ತು. ತಕ್ಷಣವೇ ಸಂಬಂಧಿಕರು ಆತನನ್ನು ಮೀರತ್ ವೈದ್ಯಕೀಯ ಕಾಲೇಜಿಗೆ ದಾಖಲಿಸಿದ್ದಾರೆ.
ತನ್ನ ಪತ್ನಿ ಹಾಗೂ ಆಕೆಯ ಪ್ರೇಮಿ ತನ್ನನ್ನು ಸಾಯಿಸಲು ಯತ್ನಿಸಿರುವುದಾಗಿ ಪತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಘಟನೆಯ ಬಳಿಕ ಆರೋಪಿ ಪತ್ನಿ ಕಾಣೆಯಾಗಿದ್ದಾಳೆ.
ಏನಿದು ಘಟನೆ..
ಲಿಸಾಡಿಗೇಟ್ ಪ್ರದೇಶದ ಲಖಿಮ್ ಪುರದ ನಿವಾಸಿ ಕಪಿಲ್ ಸುಮಾರು ಒಂದು ವರ್ಷದ ಹಿಂದೆ ಬಿಜ್ನೋರ್ ನಿವಾಸಿ ಮಹಿಳೆಯೊಬ್ಬಳನ್ನು ಮದುವೆಯಾಗಿದ್ದ. ಮದುವೆಗೆ ಮುಂಚೆಯೇ, ಹುಡುಗಿ ಮತ್ತು ಅವಳ ಸೋದರ ಮಾವ ಅನೈತಿಕ ಸಂಬಂಧ ಹೊಂದಿದ್ದರು.
ಮದುವೆಯ ಬಳಿಕ ಆಕೆ ತನ್ನ ಸೋದರ ಮಾವನನ್ನು ಭೇಟಿಯಾಗುವುದನ್ನು ಪತಿ ವಿರೋಧಿಸಿದಾಗ, ಪತ್ನಿ ತನ್ನ ಗಂಡನ ಮೇಲೆ ಹಲ್ಲೆ ನಡೆಸುತ್ತಿದ್ದಳು. ಮಾತ್ರವಲ್ಲದೆ ಪತಿಯ ಮನೆಯವರನ್ನೂ ನಿಂದಿಸುತ್ತಿದ್ದಳು. ಅವರು ವಿರೋಧಿಸಿದಾಗ ಪತಿ ಮತ್ತು ಮನೆಯವರನ್ನು ವರದಕ್ಷಿಣೆ ಕಿರುಕುಳ ಮತ್ತು ಸುಳ್ಳು ಸಾವಿನ ಪ್ರಕರಣದಲ್ಲಿ ಸಿಕ್ಕಿಸುವುದಾಗಿ ಬೆದರಿಕೆ ಹಾಕಿದ್ದಳು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಭಾನುವಾರ ಪತಿ, ಪತ್ನಿ ನಡುವೆ ವಾಗ್ವಾದ ನಡೆದಿದೆ. ಕೋಪಗೊಂಡ ಪತ್ನಿ ಆ್ಯಸಿಡ್ಅನ್ನು ನೀರಿನೊಂದಿಗೆ ಬೆರೆಸಿ ಕೊಲ್ಲಲು ಪ್ರಯತ್ನಿಸಿದ್ದಳು. ಘಟನೆ ಬಳಿಕ ಪತ್ನಿ ನಾಪತ್ತೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.