ಭುವನೇಶ್ವರ: ಖಾಸಗಿ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ರೋಗಿಯೊಬ್ಬರು ಜೀವನಪೂರ್ತಿ ಸಂಕಷ್ಟ ಪಡುವಂತಾಗಿರುವ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ.
ಹೊಟ್ಟೆ ನೋವಿನ ಕಾರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಈ ವೇಳೆ ವೈದ್ಯರು ಹೊಟ್ಟೆಯೊಳಗೆ ನವಿರು ಜಾಲರಿಯಂತಹ ವಸ್ತುವನ್ನ ಬಿಟ್ಟು ಹೊಲಿಗೆ ಹಾಕಿದ್ದಾರೆ. ಇದರಿಂದ ಅವರ ಜೀವನವೇ ಈಗ ಹಾಳಾಗಿ ಹೋಗಿದೆ ಎಂದು ಮಹಿಳೆ ಕುಟುಂಬದವರು ಆರೋಪಿಸಿದ್ದಾರೆ.
ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮಹಿಳೆ ಹೆಸರು ಪುಷ್ಪಾಂಜಲಿ. ಆಪರೇಷನ್ ಆದ ಬಳಿಕ ಮತ್ತೆ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಅವರ ಪತಿ ಆನಂದ್ ಅದೇ ಆಸ್ಪತ್ರೆಗೆ ಪತ್ನಿಯನ್ನ ದಾಖಲಿಸಿದ್ದರು. ಆದರೆ, ಸಂಬಂಧಪಟ್ಟ ವೈದ್ಯರು ಅಲ್ಟ್ರಾಸೌಂಡ್ ಡಯಾಗ್ನೋಸ್ಟಿಕ್ ಪರೀಕ್ಷೆ ನಡೆಸಲು ನಿರಾಕರಿಸಿದ್ದಾರಂತೆ. ಇದರಿಂದ ಬೇರೆ ಆಸ್ಪತ್ರೆಗೆ ಮಹಿಳೆ ದಾಖಲಿಸಿದಾಗ ಹೊಟ್ಟೆಯಲ್ಲಿ ಜಾಲರಿಯಂತಹ ವಸ್ತುಗಳನ್ನ ಬಿಟ್ಟು ಹೊಲಿಗೆ ಹಾಕಿರುವುದು ಗೊತ್ತಾಗಿದೆ.
ಇದೀಗ ಮಹಿಳೆಯನ್ನ ದೆಹಲಿಯ ಏಮ್ಸ್ಗೆ ದಾಖಲಿಸಲಾಗಿದೆ. ಈಗಾಗಲೇ ಅವರು 2 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಈ ಸಂಬಂಧ ಮಾತನಾಡಿರುವ ಪತಿ ಆನಂದ್, ಮುಂದಿನ ಚಿಕಿತ್ಸೆಗೆ ಹೇಗೆ ಹಣ ಹೊಂದಿಸಲಿ ಎಂದು ಗೋಳಾಡುತ್ತಿದ್ದಾರೆ. ಇದೇ ವೇಳೆ ಖಾಸಗಿ ಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.