ನವದೆಹಲಿ: ಹೊಂದಾಣಿಕೆಯ ಒಟ್ಟು ಆದಾಯ (ಎಜಿಆರ್) ಸಂಬಂಧಿತ ಬಾಕಿ ಹಣವನ್ನು ಸರ್ಕಾರಕ್ಕೆ ಪಾವತಿಸಲು ಟೆಲಿಕಾಂ ಕಂಪನಿಗಳು ಸಿದ್ಧವಿಲ್ಲದಿದ್ದರೆ, ತರಂಗಾಂತರ ಹಂಚಿಕೆ ರದ್ದುಗೊಳಿಸಿ ಆದೇಶಿಸಬಹುದು ಎಂದು ಸುಪ್ರೀಂಕೋರ್ಟ್ ಸೋಮವಾರ ಹೇಳಿದೆ.
ಬಾಕಿ ಹಣ ಪಾವತಿಯಾಗದೇ ಇದ್ದರೆ, ಟೆಲಿಕಾಂ ಇಲಾಖೆ (ಡಿಒಟಿ) ತರಂಗಾಂತರ ಹಂಚಿಕೆ ಪರವಾನಗಿ ರದ್ದುಗೊಳಿಸಬಹುದು ಎಂದು ನ್ಯಾಯಾಲಯ ಹೇಳಿದೆ. ದಿವಾಳಿತನಕ್ಕೆ ಒಳಗಾಗಿರುವ ಟೆಲಿಕಾಂ ಕಂಪನಿಗಳಿಗೆ ತರಂಗಾಂತರ ಹಂಚಿಕೆ ಮಾಡಬಹುದೇ ಮತ್ತು ಅವರಿಂದ ಬಾಕಿ ಹಣ ಹೇಗೆ ವಸೂಲಿ ಮಾಡಬಹುದು ಎಂಬುವುದರ ಬಗ್ಗೆ, ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಎಸ್ ಅಬ್ದುಲ್ ನಜೀರ್ ಮತ್ತು ಎಂ ಆರ್ ಷಾ ಅವರನ್ನೊಳಗೊಂಡ ನ್ಯಾಯಪೀಠ ತೀರ್ಪು ಕಾಯ್ದಿರಿಸಿದೆ.
ಅಲ್ಲದೇ, ತರಂಗಾಂತರ ಹಂಚಿಕೆಯಲ್ಲಿ ಆರ್‌ಕಾಂ, ಏರ್‌ಸೆಲ್ ಮತ್ತು ವಿಡಿಯೋಕಾನ್‌ನೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿರುವ ಜಿಯೋ ಮತ್ತು ಏರ್‌ಟೆಲ್ ಸಂಸ್ಥೆಗಳ ಬಾಕಿ ಪಾವತಿಯ ಬಗ್ಗೆಯೂ ನ್ಯಾಯಪೀಠ ತನ್ನ ಆದೇಶವನ್ನು ನೀಡಲಿದೆ.
ಟಿಲಿಕಾಂ ಕಂಪನಿಗಳು ಬಾಕಿ ಪಾವತಿಸಲು ಮುಕ್ತವಾಗಿ ಆಸ್ತಿ ಮಾರಾಟ ಮಾಡುವಂತಿಲ್ಲ. ಮಾರಾಟ ಮಾಡಬೇಕಾದರೆ ತರಂಗಾಂತರ ಹಂಚಿಕೆಯ ನಿಯಮಗಳನ್ನು ಪಾಲಿಸಬೇಕು. ಒಂದು ವೇಳೆ ಬಾಕಿ ಪಾವತಿಸದೇ ಮಾರಾಟ ಮಾಡಿದರೆ, ಖರೀದಿಸಿದವರ ಮೇಲೆ ಬಾಕಿ ಪಾವತಿಯ ಹೊಣೆಗಾರಿಕೆ ಬೀಳಲಿದೆ. ಸರ್ಕಾರ, ತರಂಗಾಂತರ ಹಂಚಿಕೆ ಪರವಾನಗಿ ರದ್ದುಗೊಳಿಸಿದರೆ ಟೆಲಿಕಾಂ ಕಂಪನಿಗಳು ತರಂಗಾಂತರಗಳು ಸರ್ಕಾರಕ್ಕೆ ವಾಪಸ್ ನೀಡಬೇಕು. ಬಳಿಕ ಅದನ್ನು ಹರಾಜು ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ.