ರಾಂಚಿ: 13 ವರ್ಷದ ಬಾಲಕಿ ಮೇಲೆ ಮೌಲ್ವಿಯೊಬ್ಬ ಅತ್ಯಾಚಾರ ನಡೆಸಿರುವ ಅಮಾನವೀಯ ಘಟನೆ ಜಾರ್ಖಂಡ್ನ ರಾಂಚಿಯಲ್ಲಿ ನಡೆದಿದ್ದು, ಘಟನೆಗೆ ಸಂಬಂದಿಸಿದಂತೆ ಇದೀಗ ಪೊಲೀಸ್ ಪ್ರಕರಣ ದಾಖಲಾಗಿದೆ.
ಕಳೆದ ಕೆಲ ತಿಂಗಳಿಂದ ನಿರಂತರವಾಗಿ ದುಷ್ಕೃತ್ಯವೆಸಗಿರುವ ಪರಿಣಾಮ ಬಾಲಕಿ ಗರ್ಭಿಣಿಯಾಗಿದ್ದಾರೆ. ಈ ಘಟನೆ ಬಗ್ಗೆ ಬಾಲಕಿ ಪೋಷಕರಿಗೆ ಗೊತ್ತಾಗುತ್ತಿದ್ದಂತೆ ಅವರು ದೂರು ದಾಖಲು ಮಾಡಿದ್ದಾರೆ. ದೂರಿನನ್ವಯ ಪೊಲೀಸರು ಆರೋಪಿಯ ಬಂಧನ ಮಾಡಿದ್ದಾರೆ. ಬಾಲಕಿಗೆ ಬೆದರಿಕೆ ಹಾಕಿ ನಾಲ್ಕು ತಿಂಗಳಿಂದ ನಿರಂತರವಾಗಿ ಈ ಕೃತ್ಯವೆಸಗಲಾಗಿದೆ.
ಬಾಲಕಿ ಗರ್ಭಿಣಿ ಎಂಬ ವಿಷಯ ಮೌಲ್ವಿಗೆ ಗೊತ್ತಾಗುತ್ತಿದ್ದಂತೆ ಆಕೆಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಯಾರಿಗೂ ಗೊತ್ತಾಗದಂತೆ ಗರ್ಭಪಾತ ಮಾಡಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಅತಿ ಹೆಚ್ಚು ರಕ್ತಸ್ರಾವವಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಈ ನಡುವೆ ನಡೆದ ವಿಷಯವನ್ನು ಬಾಲಕಿ ಪೋಷಕರ ಮುಂದೆ ಹೇಳಿಕೊಂಡಿದ್ದಾಳೆ. ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಬಾಲಕಿಯನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಮೌಲ್ವಿ ಬಂಧನ ಮಾಡಿ ವಿಚಾರಣೆ ನಡೆಸಲಾಗುತ್ತಿದೆ.