ಮೆಹಬೂಬ್‌ನಗರ(ತೆಲಂಗಾಣ): ಆ ಮನೆಯಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಮದುವೆ ಕಾರ್ಯಕ್ರಮ ನಡೆಯಲಿತ್ತು. ಆದರೆ, ಕಳ್ಳರ ವಕ್ರದೃಷ್ಟಿಗೆ ಮದುವೆ ಮನೆಯವರು ಚಿಂತಾಕ್ರಾಂತರಾಗಿದ್ದಾರೆ. ಬರೋಬ್ಬರಿ 1 ಕೋಟಿ. ರೂ ಮೌಲ್ಯದ ಚಿನ್ನವನ್ನು ಕಳ್ಳರು ಹೊತ್ತೊಯ್ದ ಘಟನೆ ನಡೆದಿದೆ.
ಮೆಹಬೂಬ್‌ನಗರ ಜಿಲ್ಲೆಯ ಮಿಡ್ಜಿಲ್ ಮಂಡಲ್ನ ಬೋನಪಲ್ಲಿ ನಿವಾಸಿ ಇಂದ್ರ ರೆಡ್ಡಿ ಮನೆಯಲ್ಲಿ ವಿವಾಹ ಸಂಭ್ರಮ ಮನೆ ಮಾಡಿತ್ತು. ಇದೇ ಡಿಸೆಂಬರ್ 23 ರಂದು ನಡೆಯಲಿರುವ ಮದುವೆಗೆ ಮನೆಯವರು ಸುಮಾರು 2 ಕೆಜಿಯಷ್ಟು ಚಿನ್ನಾಭರಣಗಳನ್ನು ತಂದು ಬೀರುವಿನಲ್ಲಿ ಇಟ್ಟಿದ್ದರು. ಜೊತೆಗೆ 6 ಲಕ್ಷ ರೂ ಹಣವನ್ನೂ ಇಟ್ಟಿದ್ದರು.
ಇದನ್ನೂ ಓದಿ: ಪೊಲೀಸ್ ಠಾಣೆ ಎದುರೇ ಸಾವನ್ನಪ್ಪಿದ್ದ ಆರೋಪಿ: ಹೇಗೆ ಗೊತ್ತಾ?
ವಿವಾಹ ಸಂಭ್ರಮದಲ್ಲಿದ್ದ ಮನೆಗೆ ಹಲವು ಅಪರಿಚಿತರು ಆಗಮಿಸಿದ್ದರು. ರಾತ್ರಿ ಸಮಯದಲ್ಲಿ ಬಂದವರ್ಯಾರೋ ಹಣ ಹಾಗೂ ಚಿನ್ನಾಭರಣವನ್ನು ಎಗರಿಸಿದ್ದಾರೆ ಎಂದು ಮನೆಯವರು ದೂರು ನೀಡಿದ್ದಾರೆ. ಇನ್ನು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.