ವಿಶಾಖಪಟ್ಟಣಂ (ಆಂಧ್ರ ಪ್ರದೇಶ ): ಗುರುವಾರ ಮದುವೆಯಾಗಿದ್ದಾರೆ ಎನ್ನಲಾದ ನವ ಜೋಡಿಯೊಂದು ಶುಕ್ರವಾರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಗಜುವಾಕ ಶ್ರೀನಗರ ಕಾಲೋನಿಯಲ್ಲಿ ನಡೆದಿದೆ.
ವಿಶಾಖಪಟ್ಟಣಂ ಪರವಾಡ ಮಂಡಲದ ಬೊನಂಗಿ ಗ್ರಾಮದ ಅವಿನಾಶ್ (34) ಮತ್ತು ಮೊಟೊರು ನಾಗಿಣಿ (24) ಕೆಲ ತಿಂಗಳಿನಿಂದ ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ ಗುರುವಾರ ಪರವಾಡ ಪೊಲೀಸ್ ಠಾಣೆಗೆ ಬಂದ ಜೋಡಿ, ನಾವು ಕಶಿಮ್ಕೋಟದ ದುರ್ಗಾದೇವಿ ದೇವಸ್ಥಾನದಲ್ಲಿ ಮದುವೆಯಾಗಿದ್ದೇವೆ ನಮಗೆ ರಕ್ಷಣೆ ನೀಡಿ ಎಂದು ಪೊಲೀಸರನ್ನು ಕೇಳಿಕೊಂಡಿದ್ದರು. ಮದುವೆಯನ್ನು ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾಯಿಸಿದ್ದರೆ ರಕ್ಷಣೆ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದರು.
ಪೊಲೀಸ್ ರಕ್ಷಣೆಗಾಗಿ ಮತ್ತೆ ಮದುವೆಯಾಗಲು ನಿರ್ಧರಿಸಿದ್ದರು:
ಠಾಣೆಯಿಂದ ಹಿಂದಿರುಗಿದ ನವ ದಂಪತಿ ಗಜುವಾಕಾದಲ್ಲಿ ಒಂದು ಮನೆಯನ್ನು ಬಾಡಿಗೆಗೆ ಪಡೆದು, ಶುಕ್ರವಾರ ಬೆಳಗ್ಗೆ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಯಾಗಲು ನಿರ್ಧರಿಸಿದ್ದರು. ಆದರೆ, ಶುಕ್ರವಾರ ಬೆಳಗ್ಗೆ ಬಾಡಿಗೆ ಮನೆಯ ಮಾಲೀಕ ಬಂದು ದಂಪತಿ ಬಾಗಿಲು ತೆರೆಯದಿದ್ದನ್ನು ಗಮನಿಸಿ, ಮನೆಯೊಳಗೆ ನೋಡಿದಾಗ ಇಬ್ಬರೂ ನೇಣು ಬಿಗಿದ ಸ್ಥಿತಿಯಲ್ಲಿ ಹೆಣವಾಗಿ ಕಂಡಿದ್ದಾರೆ. ಈ ಬಗ್ಗೆ ಮನೆ ಮಾಲೀಕ ತಕ್ಷಣ ಗಜುವಾಕಾ ಪೊಲೀಸರಿಗೆ ಮಾಹಿತಿ ನೀಡಿದ್ದರು.
ನಾಗಿಣಿ ಈ ಹಿಂದೆ ಮದುವೆಯಾಗಿದ್ದಳು :
ನವ ಜೋಡಿಯ ಆತ್ಮಹತ್ಯೆಯ ಹಿಂದಿನ ಜಾಡು ಹಿಡಿದು ಹೊರಟ ಪೊಲೀಸರಿಗೆ, ನಾಗಿಣಿ ಐದು ವರ್ಷಗಳ ಹಿಂದೆ ಪಾಪಾರಾವ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದಳು, ಗಂಡನೊಂದಿಗೆ ಅಂಡಮಾನ್‌ನಲ್ಲಿ ತಂಗಿದ್ದಳು. ಆದರೆ, ಮಕ್ಕಳಾಗದ ಹಿನ್ನೆಲೆ ಆಕೆ ತನ್ನ ಗಂಡನಿಂದ ದೂರವಾಗಿ ತವರು ಮನೆ ಬೊನಂಗಿಯಲ್ಲಿ ವಾಸಿಸುತ್ತಿದ್ದಳು ಎಂದು ತಿಳಿದು ಬಂದಿದೆ.
ವಿವಾಹಿತೆಗೆ ಮತ್ತೊಬ್ಬನೊಂದಿಗೆ ಪ್ರೀತಿ :
ತವರು ಸೇರಿದ ನಾಗಿಣಿ ಅವಿನಾಶ್ನನ್ನು ಪ್ರೀತಿಸುತ್ತಿದ್ದಳು. ತನ್ನ ಪತ್ನಿಯ ಪ್ರೇಮ ಸಂಬಂಧದ ಬಗ್ಗೆ ತಿಳಿದು ಆಕೆಯ ಮೊದಲ ಪತಿ ಮೂರು ದಿನಗಳ ಹಿಂದೆ ಅಂಡಮಾನ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಎನ್ನಲಾಗ್ತಿದೆ.
ಪತಿಯಿಂದ ದೂರವಾಗಿ ಅವಿನಾಶ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದ ನಾಗಿಣಿ, ಮದುವೆಯಾಗಿದ್ದೇನೆ ಎಂದ ಬಳಿಕ ಆತ್ಮಹತ್ಯೆ ಮಾಡಿಕೊಳ್ಳಲು ಕುಟುಂಬದವರ ಭಯವೇ ಕಾರಣ ಎಂದು ಹೇಳಲಾಗ್ತಿದೆ. ಮನೆಯವರು ನಮ್ಮಿಬ್ಬರ ಪ್ರೀತಿ ಮತ್ತು ಮದುವೆಯನ್ನು ತಿರಸ್ಕರಿಸಬಹುದು ಎಂಬ ಭಯದಿಂದ ನವ ಜೋಡಿ ಆತ್ಮಹತ್ಯೆಗೆ ಶರಣಾಗಿರುವ ಸಂಶಯವಿದೆ. ಈ ಬಗ್ಗೆ ಕುಟುಂಬಸ್ಥರಿಂದ ಮಾಹಿತಿ ಪಡೆಯಲಾಗುವುದು ಎಂದು ಗಜುವಾಕ ಎಸಿಪಿ ರಾಮಂಜನೇಯ ರೆಡ್ಡಿ ಹೇಳಿದ್ದಾರೆ.