ನವದೆಹಲಿ: ಕೃಷಿ ಕಾನೂನು ವಿರೋಧಿಸಿ ನವದೆಹಲಿಯಲ್ಲಿ ನಡೆದ ರೈತರ ಟ್ರ್ಯಾಕ್ಟರ್ ಪರೇಡ್ ಹಿಂಸೆಗೆ ತಿರುಗಿದ್ದು, ಸಂಘರ್ಷದ ವೇಳೆ ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿಗೆ ಹಾನಿಯಾಗಿದೆ.
ರೈತರು ನಡೆಸುತ್ತಿದ್ದ ಪ್ರತಿಭಟನೆ ವೇಳೆ ಅನೇಕ ಸಮಾಜಘಾತುಕ ಶಕ್ತಿಗಳು ಭಾಗಿಯಾಗಿ ಹಿಂಸಾಚಾರಕ್ಕೆ ಕಾರಣವಾಗಿವೆ ಎಂದು ರೈತ ಸಂಘಟನೆಗಳು ಹೇಳುತ್ತಿವೆ.
ಇದನ್ನೂ ಓದಿ: ರಣರಂಗವಾಯ್ತು ದಿಲ್ಲಿ: ಪೀರಗರಿ ಚೌಕ್‌ನಲ್ಲಿ ಪೊಲೀಸ್ ಬ್ಯಾರಿಕೇಡ್ ಮುರಿದು ನುಗ್ಗಿದ ರೈತರು
ಅಪಾರ ಪ್ರಮಾಣದ ಆಸ್ತಿ ಹಾನಿ:
ಪ್ರತಿಭಟನಾಕಾರರು ಕೆಂಪುಕೋಟೆಗೆ ಲಗ್ಗೆ ಹಾಕಿ ಸಿಖ್ಖರ ಖಾಲ್ಸಾ ಬಾವುಟ ಹಾರಿಸಿದ್ದಾರೆ. ಈ ವೇಳೆ ಐತಿಹಾಸಿಕ ಸ್ಮಾರಕವಾದ ಕೆಂಪುಕೊಟೆಗೆ ಸಣ್ಣ ಪ್ರಮಾಣದ ಹಾನಿಯಾಗಿದೆ ಎಂದು ಹೇಳಲಾಗಿದೆ.
ಇದನ್ನು ಹೊರತುಪಡಿಸಿದಂತೆ, ಸರ್ಕಾರಿ ಬಸ್ಸುಗಳು, ಬಸ್ ನಿಲ್ದಾಣಗಳು, ಮೆಟ್ರೋ ನಿಲ್ದಾಣಗಳಿಗೂ ಪ್ರತಿಭಟನಾಕಾರರು ನುಗ್ಗಿರುವ ಕಾರಣ ಹಾನಿ ಸಂಭವಿಸಿದೆ. ಸರ್ಕಾರಿ ಬಸ್‌ವೊಂದನ್ನು ಸುಟ್ಟು ಹಾಕಲಾಗಿದೆ. ಪೊಲೀಸರು ಹಾಕಿದ ಬ್ಯಾರಿಕೇಡ್‌ಗಳನ್ನು ಮುರಿದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
83 ಪೊಲೀಸರಿಗೆ ಗಾಯ
ಪ್ರತಿಭಟನೆ ವೇಳೆ ಕೆಲ ದುಷ್ಕರ್ಮಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಹೀಗಾಗಿ 83 ಮಂದಿ ಪೊಲೀಸ್ ಸಿಬ್ಬಂದಿ ಗಾಯಗೊಂಡು ವಿವಿಧ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಅಮಿತ್ ಶಾ ತುರ್ತು ಸಭೆ
ಟ್ರ್ಯಾಕ್ಟರ್ ಪರೇಡ್ ಹಿಂಸಾತ್ಮತ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಿರಿಯ ಅಧಿಕಾರಿಗಳ ತುರ್ತು ಸಭೆ ನಡೆಸಿದರು. ಈ ವೇಳೆ ದೆಹಲಿಯಲ್ಲಿ ಪ್ಯಾರಾ ಮಿಲಿಟರಿ ನಿಯೋಜನೆ ಮಾಡುವಂತೆಯೂ ಅವರು ಆದೇಶ ಹೊರಡಿಸಿದ್ದಾರೆ.
ಇನ್ನು ದೆಹಲಿಯ 11 ಮೆಟ್ರೊ ನಿಲ್ದಾಣಗಳನ್ನು ಮೆಟ್ರೊ ಸೇವೆ ಸ್ಥಗಿತಗೊಂಡಿದ್ದು, ಇಂಟರ್ನೆಟ್ ಸೇವೆಯನ್ನೂ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.