ಹೈದರಾಬಾದ್: ಜಗತ್ತೇ ಮನೆಯೊಳಗೆ ಬಂಧಿಯಾಗಿದೆ. ನಗರಗಳು ಸ್ತಬ್ಧವಾಗಿವೆ. ಲಕ್ಷಾಂತರ ಜನ ಈ ಮಾರಕ ಸೋಂಕಿಗೆ ಬಲಿಯಾಗಿದ್ದಾರೆ. ಮಿಲಿಯನ್ಗಟ್ಟಲೆ ಜನ, ಕಣ್ಣಿಗೆ ಕಾಣದ ಆ ವೈರಸ್ನಿಂದ ನರಳುತ್ತಿದ್ದಾರೆ. ಮಹಾಮಾರಿ ಕೊರೊನಾ ಸೋಂಕು ಸೃಷ್ಟಿಸಿರುವ ಅವಾಂತರ ಇದು.
ಕೋವಿಡ್-19 ಎಂಬ ಸೋಂಕು ವಕ್ಕರಿಸಿ ಅದಾಗಲೇ ಬರೋಬ್ಬರಿ ನಾಲ್ಕು ತಿಂಗಳುಗಳೇ ಕಳೆದಿವೆ. ಆದರೆ ಸೋಂಕನ್ನು ಗುಣಪಡಿಸಲು ಯಾವುದೇ ಔಷಧಿ ಇನ್ನೂ ಅಂತಿಮವಾಗಿಲ್ಲ. ಹಾಗಂತ ವಿಜ್ಞಾನಿಗಳಾಗಲಿ ತಜ್ಞರಾಗಿರಲಿ, ಔಷಧಿ ಕಂಡುಹಿಡಿಯೋ ಪ್ರಯತ್ನಕ್ಕೆ ಕೈ ಹಾಕಿಲ್ಲ ಎಂದಲ್ಲ. ಜಗತ್ತಿನ ಪ್ರಮುಖ ರಾಷ್ಟ್ರಗಳು ಔಷಧಿ ಕಂಡು ಹಿಡಿಯುವ ಭರಾಟೆಯಲ್ಲಿ ರಾತ್ರಿ-ಹಗಲು ಪ್ರಯತ್ನ ನಡೆಸುತ್ತಿದೆ.
ಕೊರೊನಾಗೆ ಹೈಡ್ರಾಕ್ಸಿಕ್ಲೊರೋಕ್ವಿನ್ ಮದ್ದೇ?
ಸದ್ಯ ಈ ಹಿಂದೆ ಮಲೇರಿಯಾ ಚಿಕಿತ್ಸೆಗೆ ಬಳಸುತ್ತಿದ್ದ ಹೈಡ್ರಾಕ್ಸಿಕ್ಲೊರೋಕ್ವಿನ್ ಮಾತ್ರೆಯನ್ನೇ ಕೊರೊನಾ ಚಿಕಿತ್ಸೆಗಾಗಿ ಬಳಸಲಾಗುತ್ತಿದೆ. ಈ ಔಷಧಿ ಉತ್ಪಾದನೆಯಲ್ಲಿ ಭಾರತವೇ ಮುಂಚೂಣಿಯಲ್ಲಿದ್ದು, ಇದಕ್ಕಾಗಿ ಅಮೆರಿಕ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳು ಭಾರತದ ಹಿಂದೆ ದುಂಬಾಲು ಬಿದ್ದಿದ್ದವು. ಆಪತ್ಕಾಲದ ನೆಂಟನಂತೆ ಭಾರತ, ಔಷಧಿಗಾಗಿ ಬೇಡಿಕೆಯಿಟ್ಟ ರಾಷ್ಟ್ರಗಳಿಗೆ ಔಷಧಿ ಪೂರೈಸಿದೆ. ಆದ್ರೆ ಇದರಿಂದ ಕೊರೊನಾವನ್ನು ಸಂಪೂರ್ಣ ಗುಣಪಡಿಸುವ ಫಲಿತಾಂಶ ಸಿಕ್ಕಿಲ್ಲ. ಇದು ಒಂದು ಮಟ್ಟಿಗೆ ಕೊರೊನಾ ರೋಗಿಗಳ ಆರೋಗ್ಯವನ್ನು ಸ್ಥಿರವಾಗಿಸುವಲ್ಲಿ ಯಶಸ್ವಿಯಾಗಿದೆ.
ಪ್ಲಾಸ್ಮಾ ಥೆರಪಿ ಪ್ರಯೋಗ...
ಪ್ಲಾಸ್ಮಾ ಥೆರಪಿ ಎಂಬ ಪ್ರಯೋಗವನ್ನು ಭಾರತ ಸೇರಿದಂತೆ ಹಲವು ದೇಶಗಳಲ್ಲಿ ನಡೆಸಲಾಗುತ್ತಿದೆ. ಸೋಂಕಿನಿಂದ ಗುಣಮುಖರಾದವರ ರಕ್ತದಲ್ಲಿರುವ ಪ್ಲಾಸ್ಮಾ ಕಣವನ್ನು ತೆಗೆದು ಅದನ್ನು ಸೋಂಕಿತರ ದೇಹಕ್ಕೆ ಸೇರಿಸಿ ಚಿಕಿತ್ಸೆ ನೀಡುವ ಈ ಪ್ಲಾಸ್ಮಾ ಥೆರಪಿಯನ್ನು ದೇಶದಲ್ಲಿ ಆರಂಭಿಸಲಾಯ್ತು. ಕೇರಳದಲ್ಲಿ ಇದು ಮೊದಲನೇ ಬಾರಿ ಪ್ರಾಯೋಗಿಕವಾಗಿ ಆರಂಭಿಸಲಾಯ್ತು. ಸೋಂಕಿನಿಂದ ಗುಣಮುಖರಾದವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿರುವುದರಿಂದ, ಅವರ ದೇಹದ ದುಗ್ದರಸ ಸೋಂಕಿತನ ದೇಹ ಸೇರಿದ ಕೂಡಲೇ ಕೊರೊನಾ ವೈರಾಣುಗಳ ವಿರುದ್ಧ ಅವು ದಾಳಿ ನಡೆಸಿ, ಆತನಲ್ಲೂ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಆ ಮೂಲಕ ಆ ರೋಗಿ ಕೂಡಾ ಶೀಘ್ರದಲ್ಲಿ ಗುಣಮುಖನಾಗುತ್ತಾನೆ ಎಂದು ಈ ಥೆರಪಿ ಆರಂಭಿಸಲಾಗಿದೆ.
ಪ್ಲಾಸ್ಮಾ ಥೆರಪಿ ಕಾನೂನು ಬಾಹಿರ!
ನಿನ್ನೆ ಆರೋಗ್ಯ ಇಲಾಖೆ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ದೇಶದಲ್ಲಿ ನಡೆಸಲಾಗುತ್ತಿರುವ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಬಗ್ಗೆ ಸ್ಪಷ್ಟನೆ ನೀಡಿರುವ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್, ಪ್ಲಾಸ್ಮಾ ಥೆರಪಿಯನ್ನು ದೇಶದಲ್ಲಿ ಪ್ರಾಯೋಗಿಕವಾಗಿ ನಡೆಸಲಾಗುತ್ತಿದೆ. ಇದನ್ನು ಚಿಕಿತ್ಸೆ ರೂಪದಲ್ಲಿ ಅಧಿಕೃತವಾಗಿ ನಡೆಸಲು ಇನ್ನೂ ಅನುಮತಿ ನೀಡಿಲ್ಲ. ಅದಲ್ಲದೇ ಇದು ಕಾನೂನು ಬಾಹಿರ ಪ್ರಕ್ರಿಯೆ. ಇದರಿಂದ ರೋಗಿಗಳ ಜೀವಕ್ಕೂ ಅಪಾಯವಾಗುವ ಸಾಧ್ಯತೆ ಇದೆ. ಹೀಗಾಗಿ ಚಿಕಿತ್ಸೆ ರೂಪದಲ್ಲಿ ಪ್ಲಾಸ್ಮಾ ಥೆರಪಿಯನ್ನು ದೇಶದಲ್ಲಿ ನಡೆಸುತ್ತಿಲ್ಲ. ಈ ಬಗ್ಗೆ ಐಸಿಎಂಆರ್ ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ.
ಯಾವಾಗ ಸಿದ್ಧವಾಗುತ್ತೆ ಕೊರೊನಾಗೆ ದಿವ್ಯೌಷಧ...
- ಸದ್ಯ ಈ ಮಾರಕ ಸೋಂಕನ್ನು ನಿವಾರಿಸಲು, ವಿಶ್ವದ ಹಲವು ರಾಷ್ಟ್ರಗಳು ಪೈಪೋಟಿಗೆ ನಿಂತಿದೆ. ವಿಶ್ವದ ದೊಡ್ಡಣ್ಣ ಅಮೆರಿಕಾ, ಕೊರೊನಾ ಹುಟ್ಟಿದ ರಾಷ್ಟ್ರ ಚೀನಾ, ಇಂಗ್ಲೆಂಡ್, ಜರ್ಮನಿ ಸೇರಿದಂತೆ ವಿಶ್ವದ ಪ್ರಬಲ ರಾಷ್ಟ್ರಗಳು ನಿದ್ದೆಗೆಟ್ಟು ವ್ಯಾಕ್ಸಿನ್ ಹಿಂದೆ ಬಿದ್ದಿವೆ. ಈ ಕುರಿತಾಗಿ ಹಲವು ಸಂಶೋಧನೆಗಳು ನಡೆಯುತ್ತಿದ್ದು, ಅಂತಿಮ ಫಲಿತಾಂಶ ಇನ್ನೂ ಲಭ್ಯವಾಗಿಲ್ಲ. ಅಧಿಕೃತವಾಗಿ ವ್ಯಾಕ್ಸಿನ್ ಸಿದ್ಧವಾಗಲು ಇನ್ನಷ್ಟು ತಿಂಗಳು ಕಾಯಲೇಬೇಕಿದೆ ಎನ್ನುತ್ತಿವೆ ಜಾಗತಿಕ ಸಂಸ್ಥೆಗಳು.
- ಈ ಹಿಂದೆ ವಕ್ಕರಿಸಿದ್ದ ಕೆಲ ಸೋಂಕು, ಸಾಂಕ್ರಾಮಿಕ ಕಾಯಿಲೆಯ ಔಷಧಿಯನ್ನೇ ಅಭಿವೃದ್ಧಿಪಡಿಸಿ ಈ ಸೋಂಕಿಗೆ ಪ್ರತರೋಧ ಒಡ್ಡುವಂತೆ ಔಷಧಿ ತಯಾರಿಸುವ ಪ್ರಯತ್ನಕ್ಕೆ ಹಲವು ರಾಷ್ಟ್ರಗಳು ಕೈಹಾಕಿವೆ. ಇದರಲ್ಲಿ ಮೊದಲ ಪ್ರಯತ್ನ ಹೈಡ್ರಾಕ್ಸಿಕ್ಲೊರೋಕ್ವಿನ್. ಇದರ ನಂತರ, ಎಬೊಲಾಗೆ ತಯಾರಾಗಿದ್ದ ಔಷಧಿಯನ್ನೇ ಅಭಿವೃದ್ಧಿಪಡಿಸಿ, ಬ್ರಿಟನ್ನಲ್ಲಿ ಕೆಲ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಆದ್ರೆ ಇದು ರೋಗಿಯ ಉಸಿರಾಟ ಪ್ರಕ್ರಿಯೆಯನ್ನು ಸುಧಾರಿಸಿದ್ದು ಬಿಟ್ಟರೆ ನಿರೀಕ್ಷಿತ ಫಲಿತಾಶ ನೀಡಿಲ್ಲ.
- ಅಮೆರಿಕಾದಲ್ಲಿ ಮೊದಲ ಔಷಧಿ ಸಂಶೋಧನೆಗೆ 100 ಕೋಟಿ ಡಾಲರ್ ಅನುದಾನ ನೀಡಲು ಟ್ರಂಪ್ ಸರ್ಕಾರ ಸಿದ್ಧವಿದೆ. ಇಲ್ಲಿ ಸುಮಾರು 12 ಸಂಸ್ಥೆಗಳು ಲಸಿಕೆ ತಯಾರಿಸವುಲ್ಲಿ ನಿರಂತರ ಪ್ರಯತ್ನದಲ್ಲಿದೆ. ಆದ್ರೆ ಈವರೆಗೆ ಮೂರು ಲಸಿಕೆಗಳು ಮಾತ್ರವೇ ಪ್ರಾಯೋಗಿಕ ಹಂತಕ್ಕೆ ಬಂದು ತಲುಪಿದೆ. ಅಮೆರಿಕಾದ 'ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಲರ್ಜಿ ಆ್ಯಂಡ್ ಇನ್ಫೆಕ್ಷನ್ ಡಿಸೀಸ್' ಸಂಸ್ಥೆಯು ನಮಗೆ ಲಸಿಕೆ ತಯಾರಿಸಲು ಕನಿಷ್ಟ 12 ತಿಂಗಳು ಬೇಕು ಎಂದು ಹೇಳಿದೆ. ಹೀಗಾಗಿ ಸದ್ಯದ ಮಟ್ಟಿಗೆ ಅಂತಿಮ ಔಷದ ಇನ್ನೂ ದೂರದ ವಿಚಾರ.
- ಇಂಗ್ಲೆಂಡ್ನ ಪ್ರಸಿಧ್ಧ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡವು ಔಷಧಿಯೊಂದನ್ನು ತಯಾರಿಸಿದ್ದು, ಇದು ಪ್ರಾಯೋಗಿಕ ಹಂತದಲ್ಲಿದೆ. ಈ ಲಸಿಕೆಯನ್ನು ಈಗಾಗಲೇ ಇಲಿಗಳ ಮೇಲೆ ಪ್ರಯೋಗಿಸಿ ಸಕಾರಾತ್ಮಕ ಫಲಿತಾಂಶ ಲಭಿಸಿದೆ. ಈ ಲಸಿಕೆಯನ್ನು ಮೊದಲ ಹಂತದಲ್ಲಿ 510 ಜನರ ಮೇಲೆ ಪ್ರಯೋಗಿಸಲು ಸಂಸ್ಥೆ ಅನುಮತಿ ಪಡೆದಿದೆ.
- ಇನ್ನು ಜರ್ಮನ್ನ ಬಯೋ ಎನ್ಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿದ ವ್ಯಾಕ್ಸಿನ್ ಅನ್ನು ಈಗಾಗಲೇ ಮನುಷ್ಯನ ಮೇಲೆ ಪ್ರಯೋಗಿಸಲಾಗುತ್ತಿದೆ. ಪ್ರಾಥಮಿಕ ಹಂತದಲ್ಲಿ 200 ಆರೋಗ್ಯವಂತರ ಮೇಲೆ ಹಾಗೂ ಎರಡನೇ ಹಂತದಲ್ಲಿ ರೋಗಪೀಡಿತರ ಮೇಲೆ ಪ್ರಯೋಗ ನಡೆಸಲಾಗುತ್ತಿದೆ. ಇನ್ನು ಇದರ ಫಲಿತಾಶಕ್ಕಾಗಿ ಜೂನ್ ಅಂತ್ಯದವರೆಗೂ ಕಾಯಬೇಕಿದೆ.
ನಮ್ಮ ಭಾರತದ ಪ್ರಯತ್ನ ಎಲ್ಲಿಗೆ ತಲುಪಿದೆ ಗೊತ್ತಾ?
ಭಾರತವೇನೂ ಮಾಹಾಮಾರಿ ಕೊರೊನಾ ವೈರಸ್ಗೆ ಲಸಿಕೆ ಕಂಡುಹಿಡಿಯುವಲ್ಲಿ ಹಿಂದೆ ಬಿದ್ದಿಲ್ಲ. ದೇಶದ ಹಲವು ಸಂಸ್ಥೆಗಳು ಈ ಸಂಬಂಧ ನಿರಂತರ ಪ್ರಯತ್ನದಲ್ಲಿದೆ. ಇದರಲ್ಲಿ ಪುಣೆಯ 'ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ' ಮುಂಚೂಣಿಯಲ್ಲಿದೆ. ಈ ಸಂಸ್ಥೆ ತಯಾರಿಸಿರುವ ಔಷಧಿಯು ಬ್ರಿಟನ್ನಲ್ಲಿ ಪ್ರಯೋಗಿಕ ಪರೀಕ್ಷೆಯಲ್ಲಿದ್ದು, ಈ ವರ್ಷ ಸುಮಾರು 6 ಕೋಟಿಗೂ ಹೆಚ್ಚು ಡೋಸ್ಗಳನ್ನು ಉತ್ಪಾದಿಸಲು ಸಂಸ್ಥೆ ಯೋಜಿಸಿದೆ.
ವಿಶ್ವದಲ್ಲೇ ದೊಡ್ಡ ಪ್ರಮಾಣದಲ್ಲಿ ಲಸಿಕೆಗಳನ್ನು ಸೆರಂ ಸಂಸ್ಥೆ ತಯಾರಿಸುತ್ತಿದ್ದು, ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯವು ಅಭಿವೃದ್ಧಿಪಡಿಸಿದ ಲಸಿಕೆಯನ್ನು ಸೆರಂ ಸಂಸ್ಥೆ ಸಾಮೂಹಿಕವಾಗಿ ಉತ್ಪಾದಿಸುತ್ತಿದೆ. ಕಳೆದ ವಾರ ಲಸಿಕೆಯನ್ನು ಮನುಷ್ಯರ ಮೇಲೆ ಪರೀಕ್ಷಿಸಲು ಪ್ರಾರಂಭಿಸಲಾಗಿದ್ದು, ಕೊರೊನಾಗೆ ಔಷಧಿ ತಯಾರಿಸುವ ರೇಸ್ನಲ್ಲಿ ಸಂಸ್ಥೆ ಮುಂಚೂಣಿಯಲ್ಲಿದೆ.
'ChAdOx1 nCoV-19' ಎಂದು ಕರೆಯಲ್ಪಡುವ ಆಕ್ಸ್‌ಫರ್ಡ್ ಲಸಿಕೆ ಕೋವಿಡ್ -19 ವಿರುದ್ಧ ಕಾರ್ಯನಿರ್ವಹಿಸುತ್ತಿದೆ ಎಂಬುದು ಇನ್ನೂ ಸಾಬೀತಾಗಿಲ್ಲ. ಆದರೂ, ಪ್ರಾಣಿಗಳ ಮೇಲಿನ ಪ್ರಯೋಗಗಳಲ್ಲಿ ಯಶಸ್ಸ ಕಂಡುಬಂದಿದ್ದರಿಂದ ಮತ್ತು ಮನುಷ್ಯನ ಮೇಲಿನ ಪರೀಕ್ಷೆಗಳಲ್ಲಿ ಪ್ರಗತಿ ಸಾಧಿಸಿದ್ದರಿಂದ ಅದನ್ನು ಉತ್ಪಾದಿಸಲು ನಿರ್ಧರಿಸಿದ್ದೇವೆ. ಅಲ್ಲದೆ ಆಕ್ಸ್‌ಫರ್ಡ್ ವಿಜ್ಞಾನಿಗಳ ಸಾಮರ್ಥ್ಯದ ಬಗ್ಗೆ ನಮಗೆ ನಂಬಿಕೆ ಇರುವುದರಿಂದ ಅವರೊಂದಿಗೆ ಕೈಜೋಡಿಸುತ್ತಿದ್ದೇವೆ ಎಂದು ಸೆರಂ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಆದರ್ ಪೂನವಾಲ್ಲಾ ಹೇಳಿದ್ದಾರೆ.
ಈ ಔಷಧದ ಪ್ರಾಯೋಗಿಕ ಪರೀಕ್ಸೆ ಸೆಪ್ಟೆಂಬರ್ ತಿಂಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಒಂದು ಲಸಿಕೆಗೆ 1000 ರೂ. ಖರ್ಚಾಗುವ ಸಾಧ್ಯತೆ ಇದ್ದು, ಸರ್ಕಾರ ಇದನ್ನು ಉಚಿತವಾಗಿ ಕೊಡಬೇಕು. ಈ ಔಷಧಿ ಉತ್ಪಾದನೆ ಸಂಬಂಧ ಪ್ರಧಾನ ಮಂತ್ರಿ ಕಚೇರಿ ನಮ್ಮೊಂದಿಗೆ ನಿರಂತರ ಸಂಪರ್ಕ ಹಾಗೂ ಬೆಂಬಲ ನೀಡುತ್ತಿದ್ದು, ಲಸಿಕೆ ತಾಯಾರಿಸುವ ಖರ್ಚು ಭರಿಸುವಲ್ಲಿ ಸರ್ಕಾರ ಸಹಾಯ ಮಾಡುವ ಭರವಸೆಯಿದೆ ಎಂದು ಪೂನವಾಲ್ಲಾ ಹೇಳಿದ್ದಾರೆ.
ಇನ್ನೂ ಕೆಲ ಸಂಸ್ಥೆಗಳಿಂದ ವ್ಯಾಕ್ಸಿನ್ ತಯಾರಿಸುವ ಪ್ರಯತ್ನ...
ಇದರೊಂದಿಗೆ ಹೈದರಾಬಾದ್ ಮೂಲದ ಭಾರತ ಬಯೋಟೆಕ್ ಸಂಸ್ಥೆಯು ವಿಸ್ಕಾನ್ಸಿಸ್ ಮಾಡಿಸನ್ ವಿವಿ ಹಾಗೂ ಅಮೆರಿಕ ಮೂಲದ ಫ್ಲೂಜೆನ್ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಂಡಿದೆ. ಮುಂದಿನ ದಿನಗಳಲ್ಲಿ ಸುಮಾರು 30 ಕೋಟಿ ಡೋಸ್ ಉತ್ಪಾದಿಸುವುದಾಗಿ ಸಂಸ್ಥೆ ಹೇಳಿದೆ. ಇದರೊಂದಿಗೆ ಇತರ ಏಳೆಂಟು ಸಂಸ್ಥೆಗಳು ಲಸಿಕೆ ಆವಿಷ್ಕಾರದ ಹಂತದಲ್ಲಿವೆ.
ಸದ್ಯ ಕೊರೊನಾ ಮಹಾಮಾರಿಯನ್ನು ಹೊಡೆದೋಡಿಸಲು ರಾಮಬಾಣ ಬೇಕಿದೆ. ಇದಕ್ಕೇ ಜಗತ್ತೇ ಎದ್ದು ಬಿದ್ದು ಪ್ರಯತ್ನ ನಡೆಸುತ್ತಿದೆ. ಅಂತಿಮವಾಗಿ ಔಷಧ ತಯಾರಿಸುವ ದೇಶ ಜಾಗತಿಕ ಶಕ್ತಿಯಾಗುವುದರಲ್ಲಿ ಅನುಮಾನವಿಲ್ಲ.