"ಮನುಷ್ಯರ ಮಲವನ್ನು ಮನುಷ್ಯರೇ ಸ್ವಚ್ಛಗೊಳಿಸುವುದು ಅತ್ಯಂತ ಹೇಯ ಕೆಲಸ. ಇದು ವ್ಯಕ್ತಿಯ ಮಾನವೀಯತೆಯನ್ನೇ ಕಸಿದುಬಿಡುತ್ತದೆ. ಈ ಕೆಲಸದಲ್ಲಿ ಯಾವ ಪಾವಿತ್ರ್ಯವೂ ಇಲ್ಲ" ಎಂದು ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಹೇಳಿದ್ದರು. ಈ ಕ್ಷಣದಿಂದಲೇ ಮಲ ಹೊರುವ ಪದ್ಧತಿಯನ್ನು ನಿಲ್ಲಿಸಬೇಕು ಎಂದು ಅವರು ಆಗಲೇ ಕರೆ ನೀಡಿದ್ದರು. ಅಷ್ಟೇ ಅಲ್ಲ, ಭಂಗಿ ಝಾಡು ಛೋಡೋ (ಪೊರಕೆ ಬಿಡು) ಎಂದು ಕರೆಯನ್ನೂ ನೀಡಿದ್ದರು. ಈ ಕೀಳು ವೃತ್ತಿಯನ್ನು ಪವಿತ್ರ ಎಂದು ಬಿಂಬಿಸಿದ್ದನ್ನು ಅವರು ತೀವ್ರವಾಗಿ ಖಂಡಿಸಿದ್ದರು. ಇವೆಲ್ಲ ನಡೆದು ಈಗ ದಶಕಗಳೇ ಕಳೆದಿವೆ. ಆದರೆ, ಇಂದಿಗೂ ಮಲ ಹೊರುವ ಪದ್ಧತಿ ಬೇರೆ ಬೇರೆ ರೂಪದಲ್ಲಿ ಭಾರತದಲ್ಲಿ ಜೀವಂತವಾಗಿ ಇದೆ.
ಮಲ ಹೊರುವ ಪದ್ಧತಿಯನ್ನು ನಿರ್ಮೂಲನೆ ಮಾಡಲು ಈಗ ಇರುವ ಕಾನೂನುಗಳು ಈ ಅನಿಷ್ಟ ಪದ್ಧತಿಯನ್ನು ತೆಗೆದು ಹಾಕಲು ಸಾಲದಂತಾಗಿದೆ. 2013 ರಲ್ಲಿ ಕೇಂದ್ರ ಸರ್ಕಾರವು ಈ ಸಂಬಂಧ ಕಾನೂನು ಹೊರಡಿಸಿತ್ತು. ಇದರಲ್ಲಿ ಚರಂಡಿ ಸ್ವಚ್ಛತೆಗೆ ಮನುಷ್ಯರನ್ನು ಬಳಸುವುದನ್ನು ನಿಷೇಧಿಸಿತ್ತು ಮತ್ತು ಅವರಿಗೆ ಪುನಶ್ಚೇತನ ಕಾಯ್ದೆಯನ್ನೂ ರೂಪಿಸಿತ್ತು. ಆದರೆ ಈ ಕಾನೂನು ಇನ್ನೂ ಜಾರಿಗೆ ಬಂದಿಲ್ಲ. ಅಷ್ಟೇ ಅಲ್ಲ, ಚರಂಡಿ ಸ್ವಚ್ಛತೆಗೆ ಇನ್ನೂ ಮನುಷ್ಯರನ್ನೇ ಕೂಲಿಗಳನ್ನಾಗಿ ಬಳಸಿಕೊಳ್ಳಲಾಗುತ್ತಿದೆ.
ಈಗ ಕೇಂದ್ರ ಸರ್ಕಾರವು ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಚರಂಡಿ ಸ್ವಚ್ಛತೆಗೆ ಕೂಲಿ ಬಳಕೆಯ ನಿಷೇಧ ಮತ್ತು ಅವರ ಪುನಶ್ಚೇತನ (ತಿದ್ದುಪಡಿ) ಮಸೂದೆ 2020 ಅನ್ನು ಪರಿಚಯಿಸಲು ಯೋಜನೆ ರೂಪಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಚರಂಡಿ ಅಥವಾ ಸೆಪ್ಟಿಕ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಲು ವ್ಯಕ್ತಿಯನ್ನು ನೇಮಿಸಿಕೊಳ್ಳುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ಶಿಕ್ಷೆ ವಿಧಿಸಲಾಗುತ್ತಿದೆ. ಇಂತಹ ಅಪರಾಧ ಮಾಡಿದವರಿಗೆ 5 ವರ್ಷಗಳ ಶಿಕ್ಷೆ ಅಥವಾ 5 ಲಕ್ಷ ರೂ. ದಂಡ ಅಥವಾ ಈ ಎರಡನ್ನೂ ವಿಧಿಸುವ ಅವಕಾಶವನ್ನು ಪ್ರಸ್ತುತ ಇರುವ ಕಾಯ್ದೆಗಳು ಒದಗಿಸಿವೆ. ಆದರೆ, ಈ ಪದ್ಧತಿಯನ್ನು ನಿರ್ಮೂಲನೆ ಮಾಡಲು ಇಷ್ಟು ಶಿಕ್ಷೆ ಸಾಲದು. ಇನ್ನೂ ಕಠಿಣ ಶಿಕ್ಷೆ ಅಗತ್ಯವಿದೆ ಎಂದು ಮನಗಂಡ ಕೇಂದ್ರ ಸರ್ಕಾರ ಇನ್ನಷ್ಟು ಕಠಿಣ ಕ್ರಮಗಳನ್ನು ಹೊಸ ಮಸೂದೆಯಲ್ಲಿ ಪ್ರಸ್ತಾಪಿಸಲು ನಿರ್ಧರಿಸಿದೆ.
ಸಮಾಜದ ಹಿಂದುಳಿದ ಸಮುದಾಯವನ್ನು ಇಂತಹ ಒಳ ಚರಂಡಿ ಸ್ವಚ್ಛಗೊಳಿಸುವ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ. ಶೌಚಾಲಯ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ ಉಂಟಾಗಿದ್ದರೂ, ಅವರ ಜೀವನ ಮಟ್ಟದಲ್ಲಿ ಯಾವ ಸುಧಾರಣೆಯೂ ಕಂಡುಬಂದಿಲ್ಲ. ಹಲವು ತಲೆಮಾರುಗಳಿಂದಲೂ, ಇಂತಹ ಕೀಳು ಕೃತ್ಯಗಳಿಗೆ ಅವರನ್ನು ಬಳಸಿಕೊಳ್ಳಲಾಗುತ್ತಿದೆ. ಹಿಂದಿನ ಕಾಲದಲ್ಲಿ ಅವರು ಮಲ ಹೊರುವ ಕೆಲಸ ಮಾಡುತ್ತಿದ್ದರೆ, ಈಗ ಸೆಪ್ಟಿಕ್ ಟ್ಯಾಂಕ್‌ಗಳು, ಒಳಚರಂಡಿ ಮತ್ತು ಮ್ಯಾನ್‌ಹೋಲ್‌ಗಳನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದಾರೆ.
ಈ ಒಳಚರಂಡಿ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಾ ಪ್ರತಿ ವರ್ಷವೂ ನೂರಾರು ಕಾರ್ಮಿಕರು ಸಾವನ್ನಪ್ಪುತ್ತಲೇ ಇದ್ದಾರೆ. 2019 ರಲ್ಲೇ, ಇಂತಹ ಕೆಲಸ ಮಾಡುತ್ತಾ 119 ಜನರು ಸಾವನ್ನಪ್ಪಿದ್ದಾರೆ. 2016 ಮತ್ತು 19 ರಲ್ಲಿ ಸೆಪ್ಟಿಕ್ ಟ್ಯಾಂಕ್ ಮತ್ತು ಒಳಚರಂಡಿ ಸ್ವಚ್ಛತೆ ಕೆಲಸ ಮಾಡುತ್ತಿರುವಾಗ ದೇಶದ ವಿವಿಧ ರಾಜ್ಯಗಳಲ್ಲಿ 282 ಜನ ಕಾರ್ಮಿಕರು ಅಸು ನೀಗಿದ್ದಾರೆ. ಸಫಾಯಿ ಕರ್ಮಚಾರಿ ಆಂದೋಲನ (ಎಸ್‌ಕೆಎ) ಆರೋಪ ಮಾಡಿರುವ ಪ್ರಕಾರ, ಪೊಲೀಸ್ ಸ್ಟೇಷನ್‌ನಲ್ಲಿ ವರದಿಯಾದ ಸಂಖ್ಯೆ ಇವು. ವಾಸ್ತವವಾಗಿ ಈ ಸಂಖ್ಯೆ ಇನ್ನೂ ಹೆಚ್ಚಾಗಿದೆ. ಹಲವು ಪ್ರಕರಣಗಳು ಪೊಲೀಸ್ ಸ್ಟೇಷನ್‌ನಲ್ಲಿ ವರದಿಯಾಗಲೇ ಇಲ್ಲ ಎಂದಿದೆ. ನೈರ್ಮಲ್ಯ ಕಾರ್ಯಕರ್ತರ ಕಲ್ಯಾಣದ ಬಗ್ಗೆ ಶ್ರಮಿಸುತ್ತಿರುವ ಸ್ವಾಯತ್ತ ಸಂಸ್ಥೆ ಸಫಾಯಿ ಕರ್ಮಚಾರಿಗಳ ರಾಷ್ಟ್ರೀಯ ಆಯೋಗ (ಎನ್‌ಸಿಎಸ್‌ಕೆ) 2017 ಜನವರಿಯಿಂದ ಆಗಸ್ಟ್ ಮಧ್ಯದಲ್ಲಿ ಸೆಪ್ಟಿಕ್ ಟ್ಯಾಂಕ್ ಮತ್ತು ಮ್ಯಾನ್‌ಹೋಲ್‌ಗಳನ್ನು ಸ್ವಚ್ಛ ಮಾಡುತ್ತಿರುವಾಗ ಒಟ್ಟು 127 ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ಆದರೆ, ಎಸ್‌ಕೆಎ ಅಂದಾಜಿನ ಪ್ರಕಾರ, ರಾಷ್ಟ್ರ ರಾಜಧಾನಿ ವಲಯವೊಂದರಲ್ಲೇ ಇದೇ ಅವಧಿಯಲ್ಲಿ 429 ನೈರ್ಮಲ್ಯ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
1993 ರಲ್ಲಿ, ಮಲ ಹೊರುವುದು ಮತ್ತು ಶೌಚ ನಿರ್ಮಾಣ ಉದ್ಯೋಗ (ನಿಷೇಧ) ಕಾಯ್ದೆಯನ್ನು ಕೇಂದ್ರ ಸರ್ಕಾರ ಮಂಡಿಸಿ ಜಾರಿಗೆ ತಂದಿತ್ತು. ಆದರೆ, ರಾಜ್ಯ ಸರ್ಕಾರವು ಸಂಪೂರ್ಣವಾಗಿ ಈ ಕಾನೂನನ್ನು ನಿರ್ಲಕ್ಷಿಸಿತು. ಇದನ್ನು ಜಾರಿಗೆ ತರಲು ಯಾವ ಹಿತಾಸಕ್ತಿಯನ್ನೂ ರಾಜ್ಯ ಸರ್ಕಾರಗಳು ತೋರಲಿಲ್ಲ. ಅಷ್ಟೇ ಅಲ್ಲ, ಎಸ್‌ಕೆಎ ರಾಷ್ಟ್ರೀಯ ಸಂಯೋಜಕ ಮತ್ತು ರಾಮನ್ ಮ್ಯಾಗ್ಸೆಸೆ ಪುರಸ್ಕೃತ ಬೆಜ್ವಾಡಾ ವಿಲ್ಸನ್ ಹೇಳುವಂತೆ, 2013 ರ ಕಾಯ್ದೆಯಲ್ಲೂ ಕೂಡ ನೈರ್ಮಲ್ ಕಾರ್ಯಕರ್ತರ ಪುನಶ್ಚೇತನಕ್ಕೆ ಯಾವ ಸ್ಪಷ್ಟ ಮಾರ್ಗದರ್ಶನವನ್ನು ನೀಡಲಿಲ್ಲ. ಕಾಯ್ದೆಯನ್ನು ಮೊದಲು ಪ್ರಸ್ತಾಪ ಮಾಡಿದಾಗ, ಚರಂಡಿ ಕಾಮಗಾರಿಗೆ ಮನುಷ್ಯರ ಬಳಕೆಯನ್ನು ನಿರ್ಮೂಲನೆಗೊಳಿಸುವುದು ಮತ್ತು ಅವರ ಪುನಶ್ಚೇತನ ಎಂಬುದಾಗಿ ಪ್ರಸ್ತಾಪ ಮಾಡಿತ್ತು. ಈ ಇಡೀ ಯೋಜನೆಯ ವೆಚ್ಚ 4,825 ಕೋಟಿ ರೂ. ಆಗಿತ್ತು. ಈ ಕಾಯ್ದೆ ಜಾರಿಗೆ ಮುಂದಿನ 9 ತಿಂಗಳಲ್ಲಿ ಈ ಹಣವನ್ನು ವೆಚ್ಚ ಮಾಡಬೇಕು ಎಂದು ಪ್ರಸ್ತಾಪಿಸಲಾಗಿತ್ತು. ಆದರೆ, ಕಾಯ್ದೆ ಜಾರಿಗೆ ಬರಲಿಲ್ಲ. ಯಾಕೆಂದರೆ, ಈ ಹಣವನ್ನು ಸರ್ಕಾರ ಬಿಡುಗಡೆ ಮಾಡುವಲ್ಲಿ ವಿಫಲವಾಗಿತ್ತು. ಇದೇ ಕಾರಣಕ್ಕೆ ಚರಂಡಿ ಸ್ವಚ್ಛತೆಗೆ ಮನುಷ್ಯರನ್ನು ಬಳಸುವ ಅನಿಷ್ಠ ಪದ್ಧತಿ ಹಾಗೆಯೇ ಮುಂದುವರಿದಿದೆ.
ಇತ್ತೀಚೆಗೆ ನೀತಿ ಆಯೋಗ ನಡೆಸಿದ ಸಮೀಕ್ಷೆಯ ಪ್ರಕಾರ, ದೇಶದ 18 ರಾಜ್ಯಗಳು ಮತ್ತು 170 ಜಿಲ್ಲೆಗಳಲ್ಲಿ ಚರಂಡಿ ಕೆಲಸಗಾರರಾಗಿ 54,130 ಜನರು ಕೆಲಸ ಮಾಡುತ್ತಿದ್ದಾರೆ ಎಂದು ಅಂದಾಜು ಮಾಡಲಾಗಿದೆ. ಕೇಂದ್ರ ಸಚಿವ ರಾಮದಾಸ್ ಅಠಾವಳೆ ಅವರೇ ರಾಜ್ಯ ಸಭೆ ಅಧಿವೇಶನದಲ್ಲಿ ಈ ಅಂಕಿ-ಸಂಖ್ಯೆಗಳನ್ನು ಮಂಡಿಸಿದ್ದರು. ಆದರೆ, ವಾಸ್ತವದ ಚಿತ್ರಣ ಹೇಳುವುದೇ ಬೇರೆ. ಅಂದಾಜಿನ ಪ್ರಕಾರ ಲಕ್ಷಗಟ್ಟಲೆ ಜನರು ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. 2011ರ ಜನಸಂಖ್ಯೆಯ ಪ್ರಕಾರ 21 ಲಕ್ಷ ಶೌಚ ಹೊಂಡಗಳಿದ್ದು, ಇವುಗಳನ್ನು ಮನುಷ್ಯರೇ ಸ್ವಚ್ಛಗೊಳಿಸಬೇಕಾದ ಸ್ಥಿತಿಯಲ್ಲಿವೆ. ಸಾಮಾಜಿಕ ನ್ಯಾಯ ಸಚಿವಾಲಯ ಬಹಿರಂಗಗೊಳಿಸಿರುವ ಪ್ರಕಾರ, 1992 ರಲ್ಲಿ 5.88 ಲಕ್ಷ ಇದ್ದ ನೈರ್ಮಲ್ಯ ಕಾರ್ಮಿಕರ ಸಂಖ್ಯೆ 2002-03 ರಲ್ಲಿ 6.76 ಲಕ್ಷಗಳಿಗೆ ತಲುಪಿದೆ. 2002 -03 ರ ನಂತರ ಈ ಸಂಖ್ಯೆ ಇನ್ನಷ್ಟು ಏರಿಕೆಯಾಗಿರುತ್ತದೆ. ಮೂಲಗಳ ಪ್ರಕಾರ ಸುಮಾರು 8 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಅಂದಾಜು ಮಾಡಲಾಗಿದೆ.
ಈಗಿನ ಚರಂಡಿ ವ್ಯವಸ್ಥೆಯನ್ನು ಆಧುನಿಕಗೊಳಿಸಲು ಕೇಂದ್ರ ಸರ್ಕಾರ ಯೋಜಿಸಿದೆ. ಪ್ರಸ್ತುತ ವ್ಯವಸ್ಥೆಯಲ್ಲಿ ಮನುಷ್ಯರು ಒಳಚರಂಡಿಯನ್ನು ಸ್ವಚ್ಛ ಮಾಡುವ ಅಗತ್ಯವಿದೆ. ಆದರೆ, ಇದರ ಬದಲಿಗೆ ಆಧುನಿಕ ವ್ಯವಸ್ಥೆಯನ್ನು ಜಾರಿಗೊಳಿಸಲು ಕೇಂದ್ರ ಯೋಜಿಸಿದೆ. ಇದಕ್ಕಾಗಿ ಸ್ಥಳೀಯ ಆಡಳಿತ ಸಂಸ್ಥೆಗಳು ಮೊದಲೇ ಸಿದ್ಧಗೊಳ್ಳಬೇಕು. ನಾಗರಿಕರಿಗೂ ಈ ಬಗ್ಗೆ ಅರಿವು ಮೂಡಿಸಬೇಕಿದೆ. ಈ ಬಾರಿ, ತಿದ್ದುಪಡಿ ಮಾಡಿದ ಕಾಯ್ದೆಯು ಕೇವಲ ಕಠಿಣವಾಗಿರಬೇಕು. ಅಷ್ಟೇ ಅಲ್ಲ, ಈ ಸಾಮಾಜಿಕ ಪಿಡುಗಿಗೆ ಕೊನೆಯನ್ನೂ ಹಾಡಬೇಕು. ಇದೆಲ್ಲದರ ಜೊತೆಗೆ, ಈ ಕಾಯ್ದೆಯನ್ನು ಅತ್ಯಂತ ಕಟ್ಟುನಿಟ್ಟಾಗಿ, ಇಚ್ಛಾಶಕ್ತಿಯಿಂದ ಜಾರಿಗೊಳಿಸಬೇಕು.