ನವದೆಹಲಿ: ದೇಶದಲ್ಲಿನ ತೈಲ ದರ ಕಡಿಮೆ ಮಾಡುವಂತೆ ಸರ್ಕಾರ ನಿರ್ದೇಶನ ನೀಡಬೇಕೆಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ವ್ಯಕ್ತಿಗೆ ಕೋರ್ಟ್ ಎಚ್ಚರಿಕೆ ನೀಡಿದೆ. ಮಾತ್ರವಲ್ಲದೆ ಒಂದು ವೇಳೆ ವಾದ ಮುಂದುವರೆಸಲು ಮೇಲ್ಮನವಿ ಸಲ್ಲಿಸಿದರೆ ದುಬಾರಿ ದಂಡ ತೆರಬೇಕಾಗುತ್ತದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದೆ.
ಪ್ರತಿನಿತ್ಯ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿದೆ ಎಂದು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯ ವಿಚಾರಣೆಯನ್ನು ಕೋರ್ಟ್ ಇಂದು ನಡೆಸಿತು. ಪಿಐಎಲ್ ಮುಂದುವರೆಸಲು ನೀವು ಬಯಸಿದರೆ ಹೆಚ್ಚಿನ ದಂಡವನ್ನು ವಿಧಿಸುವುದಾಗಿ ನ್ಯಾಯಮೂರ್ತಿ ಆರ್.ಆಫ್.ನಾರೀಮನ್ ಮತ್ತು ಇಂದಿರಾ ಬ್ಯಾನರ್ಜಿ ಅವರಿದ್ದ ದ್ವಿಸದಸ್ಯ ಪೀಠ ಅರ್ಜಿದಾರನಿಗೆ ಖಡಕ್ ವಾರ್ನಿಂಗ್ ನೀಡಿದೆ. ವಿಚಾರಣೆ ಬಳಿಕ ಅರ್ಜಿಯನ್ನು ವಜಾ ಮಾಡಿದೆ.
ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಕಡಿಮೆಯಾಗಿದ್ದರೂ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಲೇ ಇದೆ ಎಂದು ಕೇರಳ ಮೂಲದ ವಕೀಲ ಶಾಜಿ ಜೆ. ಕೊಡನ್‌ಕಂದತ್ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆರ್ಥಿಕ ನೀತಿಗಳ ನಿರ್ಧಾರಗಳನ್ನು ನ್ಯಾಯಾಂಗ ಪರಾಮರ್ಶೆಗೊಳಪಡಿಸುವ ಕಾರ್ಯದಿಂದ ನ್ಯಾಯಾಲಯಗಳು ಸದಾ ದೂರ ಉಳಿದಿವೆ.