ಕೇಂದ್ರಪಾರ(ಒಡಿಶಾ): ಫಣಿ ಚಂಡಮಾರುತ ಒಡಿಶಾ ರಾಜ್ಯದ ಜನ ಜೀವನವನ್ನು ಅಕ್ಷರಶಃ ಬೀದಿಗೆ ತಂದಿದೆ. ರಕ್ಕಸ ಮಾರುತದಿಂದ ಮನೆ ಕಳೆದುಕೊಂಡ ದಲಿತ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳೊಂದಿಗೆ ಇದೀಗ ಶೌಚಾಲಯದಲ್ಲಿ ವಾಸಿಸುತ್ತಿದ್ದಾರೆ.
ಕೇಂದ್ರಪಾರ ಜಿಲ್ಲೆಯ ರಘುದೀವ್ಪುರದ ಗ್ರಾಮದ ಖಿರೋದ್ ಜೆನಾ (58) ಇದೀಗ ತಮ್ಮ ಕುಟುಂಬದೊಂದಿಗೆ 7X6 ವಿಸ್ತೀರ್ಣದ ಶೌಚಾಲಯದಲ್ಲಿ ವಾಸ ಮಾಡುತ್ತಿದ್ದಾರೆ.
ಫಣಿ ಚಂಡಮಾರುತವು ನನ್ನ ಮನೆಯನ್ನು ನಾಶ ಮಾಡಿತು. ಆದರೆ ಶೌಚಾಲಯ ಹಾಗೆ ಉಳಿಯಿತು. ಎಲ್ಲಿ ಹೋಗಬೇಕೆಂದು ತೋಚಲಿಲ್ಲ. ನಮ್ಮ ಕುಟುಂಬ ಉಳಿಯಲು ಇದೇ ಶೌಚಾಲಯವನ್ನು ಬಳಸಲು ಸೂಚಿಸಲಾಯಿತು. ಇಲ್ಲಿ ಇನ್ನೆಷ್ಟು ದಿನ ಹೀಗೆ ವಾಸ ಮಾಡ್ತೀವಿ ಎಂಬುದು ನಮಗೆ ತಿಳಿದಿಲ್ಲ ಎಂದು ಜೆನಾ ತಮ್ಮ ನೋವು ತೋಡಿಕೊಂಡರು.
ಫಣಿ ಸಂತ್ರಸ್ತರಿಗೆ ನೀಡುವ ಪರಿಹಾರಕ್ಕಾಗಿ ಅಧಿಕಾರಿಗಳು ನನ್ನನ್ನೂ ಆಯ್ಕೆ ಮಾಡಿದ್ದಾರೆ. ವಸತಿ ಯೋಜನೆಗಳಡಿ ನನಗೂ ಒಂದು ಮನೆ ನೀಡುವಂತೆ ಅರ್ಜಿ ಹಾಕಿದ್ದೆ.ಆದರೆ ಅಧಿಕಾರಿಗಳಿಂದ ಸರಿಯಾದ ಸ್ಪಂದನೆ ಸಿಕ್ಕಿಲ್ಲ ಎಂದು ಹೇಳಿಕೊಂಡಿರುವ ಅವರು, ಯಾರಾದರೂ ನೆರವು ನೀಡುತ್ತಾರೆಂಬ ನಿರೀಕ್ಷೆಯಲ್ಲಿದ್ದಾರೆ.